ಬೆಳಗಾವಿ: ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನನ್ನು ಕುಡಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾರುಗೊಪ್ಪ ಗ್ರಾಮದ ಮಾರುತಿ ವೀರೇಶ ಸಂಕಣ್ಣವರ (4) ಕೊಲೆಯಾದ ದುರ್ದೈವಿ. ಬಾಲಕನ ಸಂಬಂಧಿಯೇ ಕೊಲೆಗೈದು ಅಟ್ಟಹಾಸ ಮೆರೆದಿದ್ದಾನೆ. ಈರಪ್ಪ ಬಸಪ್ಪ ಸಂಕಣ್ಣವರ (35) ಕೊಲೆ ಮಾಡಿದ ಆರೋಪಿಯಾಗಿದ್ದು, ಕೊಲೆಗೈದು ಆರೋಪಿ ಈರಪ್ಪ ಸಂಕಣ್ಣವರ ಪರಾರಿಯಾಗಿದ್ದಾನೆ.
ಆಸ್ತಿ ವಿವಾದವೇ ಕೃತ್ಯಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಲಕನ ಅಜ್ಜ ಹಾಗೂ ಮೃತನ ತಂದೆ ಇಬ್ಬರೂ ಸಹೋದರರು. ಆಸ್ತಿ ಹಂಚಿಕೆ ಆದರೂ ಜಮೀನೆಲ್ಲವೂ ಬಾಲಕನ ಅಜ್ಜನ ಹೆಸರಿನಲ್ಲಿವೆ. ಈ ಸಂಗತಿಯೇ ಘಟನೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಬಾಲಕನ ತಾಯಿ ಮನೆಯಲ್ಲಿದ್ದರೂ ಆರೋಪಿ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.
ಓದಿ : ಚನ್ನರಾಯಪಟ್ಟಣದಲ್ಲಿ ರಾಜಿ ಸಂಧಾನಕ್ಕೆ ಕರೆದು ಯುವಕನ ಹತ್ಯೆ ಶಂಕೆ!
ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಬಂಧನಕ್ಕೆ ಶೋಧ ನಡೆಸಿದ್ದಾರೆ.