ಬೆಳಗಾವಿ: ಜಿಲ್ಲೆಯ ಅನೇಕ ನದಿಗಳಲ್ಲಿ ಒಂದಾದ ಮಲಪ್ರಭಾ ನದಿ ಒಡಲು ತುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ರೈತರು ಸದ್ಯ ನಿರಾಳರಾಗಿದ್ದಾರೆ.
ಜಿಲ್ಲೆಯ ಖಾನಾಪೂರ ತಾಲೂಕಿನ ಕನಕುಂಬಿ ಗ್ರಾಮದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಮಲಪ್ರಭಾ ನದಿ ರಾಜ್ಯದಲ್ಲಿ ಸುಮಾರು 304 ಕಿ.ಮೀ. ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿ ಪಾತ್ರಕ್ಕೆ ನೂರಾರು ಗ್ರಾಮಗಳು ಬರುವುದರಿಂದ ರೈತರ ಕೃಷಿ ಚಟುವಟಿಗಳು ಜೀವ ಪಡೆದುಕೊಂಡಿವೆ. ಮಲಪ್ರಭಾ ನದಿಗೆ ಮೂಲವಾಗಿ ಕನಕುಂಬಿ ಜಲಾಶಯದಿಂದ ನೀರು ಬರುತ್ತಿದ್ದು, ಈಗ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆಯಾಗುತ್ತಿದ್ದು, ಬತ್ತಿ ಹೋಗಿದ್ದ ಮಲಪ್ರಭಾ ನದಿಗೆ ಸದ್ಯ ಜೀವ ಪಡೆದುಕೊಂಡಿದೆ.
ಮಲಪ್ರಭಾ ನದಿಗೆ ಹೊಂದಿಕೊಂಡಂತೆ ಖಾನಾಪೂರ, ಬೈಲಹೊಂಗಲ, ಸವದತ್ತಿ ಸೇರಿದಂತೆ ಜಿಲ್ಲೆಯ ಪ್ರಮುಖ ಮೂರು ತಾಲೂಕುಗಳು ಇರುವುದರಿಂದ ನೂರಾರು ಹಳ್ಳಿಯ ರೈತರಿಗೆ ಅನೂಕುಲವಾಗುತ್ತದೆ. ಒಟ್ಟಿನಲ್ಲಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವ ಪರಿಣಾಮ ರೈತರ ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.