ಬೆಳಗಾವಿ: ತಾಲೂಕಿನ ಕಿಣಯೆ ಡ್ಯಾಮ್ಗೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪರಿಶೀಲನೆ ನಡೆಸಿದರು.
ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಆದಷ್ಟು ಬೇಗ ಡ್ಯಾಮ್ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪರಿಶೀಲನೆ ವೇಳೆ ಕಿಣಯೆ ಡ್ಯಾಮ್ ಅಧಿಕಾರಿಗಳಿಂದ ಡ್ಯಾಮ್ನ ಸಾಮರ್ಥ್ಯ, ನೀರು ಸಂಗ್ರಹ, ಗಾರ್ಡನ್ ಸೇರಿದಂತೆ ಪ್ರಮುಖ ಮಾಹಿತಿ ಪಡೆದ ಅವರು ಪ್ರವಾಸಿ ತಾಣ ಮಾಡಲು ಬೇಕಾದ ಅನುದಾನದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ಮಾತನಾಡಿದ ಅವರು, ಕಿಣಯೆ ಆಣೆಕಟ್ಟು ಕಾಮಗಾರಿ ಮಾರ್ಚ್ ವೇಳೆಗೆ ಮುಗಿಯಲಿದ್ದು, ಜೂನ್ ತಿಂಗಳ ಅವಧಿಯಲ್ಲಿ ಸಿಎಂ ನೇತೃತ್ವದಲ್ಲಿ ಡ್ಯಾಮ್ ಲೋಕಾರ್ಪಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಗೋವಾ, ಮಹಾರಾಷ್ಟ್ರದಿಂದ ಪ್ರವಾಸಿಗರನ್ನು ಸೆಳೆಯಲು ಹಾಗೂ ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಕಿಣಯೆ ಡ್ಯಾಮ್ನಲ್ಲಿ ಸಣ್ಣದಾದ ಒಂದು ಬೃಂದಾವನ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಅದಕ್ಕೆ ಬೇಕಾದ ಪ್ರೊಜೆಕ್ಟ್ ರಿಪೋರ್ಟ್ ತಯಾರಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದರೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಪಡೆದುಕೊಂಡು 2-3 ವರ್ಷಗಳಲ್ಲಿ ಆ ಕಾಮಗಾರಿಯನ್ನು ಮುಗಿಸುವ ಮೂಲಕ ಪ್ರವಾಸಿ ತಾಣವಾಗಿ ಮಾಡಲಾಗುವುದು ಎಂದರು.
ಈ ಡ್ಯಾಮ್ಗೆ ಮಹಾದಾಯಿ ನೀರು ತರುವ ವಿಚಾರವಿಲ್ಲ. ಡ್ಯಾಮ್ಗೆ ಮಳೆ ನೀರು ಸೇರಿದಂತೆ ಸಣ್ಣಪುಟ್ಟ ನಾಲಾಗಳಿಂದ ಮಾತ್ರ ನೀರು ಹರಿದು ಬರಲಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಸಹಕಾರಿ ಆಗಲಿದೆ. ಬೆಳಗಾವಿಗೆ ಕುಡಿಯುವ ನೀರು ಕೊಡುವ ಬಗ್ಗೆ ಇನ್ನೂ ಸ್ಪಷ್ಟವಿಲ್ಲ. ಬೆಳಗಾವಿಗೆ ಈಗಾಗಲೇ ಹಿಡಕಲ್ ಡ್ಯಾಮ್ನಿಂದ ನೀರು ಬಿಡಲಾಗುತ್ತಿದೆ. ಹೀಗಾಗಿ ಕುಂದಾನಗರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗೋದಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ: ಇದೊಂದು ಐತಿಹಾಸಿಕ ಬಜೆಟ್: ಕೇಂದ್ರ ಬಜೆಟ್ ಸ್ವಾಗತಿಸಿದ ರಾಜ್ಯ ಸರ್ಕಾರ
ಇನ್ನು, ನನ್ನ ಹೆಸರು ಹೇಳಿಕೊಂಡು ಬೆದರಿಕೆ ಹಾಕುವವರ ವಿರುದ್ಧ ಮುಲಾಜಿಲ್ಲದೇ ಪೊಲೀಸರು ಕ್ರಮ ಕೈಗೊಳ್ಳಬೇಕು. ನೊಂದವರು ಕೂಡ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಂತಹವರು ಎಷ್ಟೇ ಪ್ರಭಾವಿಗಳಿದ್ದರೂ ಪ್ರಕರಣ ದಾಖಲಿಸುವಂತೆ ನಾನೇ ಪೊಲೀಸರಿಗೆ ಹೇಳುತ್ತೇನೆ ಎಂದರು.