ಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ಚೆನ್ನಮ್ಮ, ಇಡೀ ದೇಶಕ್ಕೆ ಹೆಮ್ಮೆ. ಚೆನ್ನಮ್ಮನ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಚೆನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರುದಿನಗಳ ಕಾಲ ಆಯೋಜಿಸಲಾಗಿರುವ ಕಿತ್ತೂರು ಉತ್ಸವವನ್ನು ನೆರೆಸಂತ್ರಸ್ತರಿಗೆ ಸೂರು ಒದಗಿಸುವ ಭರವಸೆಯೊಂದಿಗೆ ಉದ್ಘಾಟಿಸಿದ ಡಿ.ಸಿ.ಎಂ, ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.
ಕಿತ್ತೂರು ಪ್ರಾಧಿಕಾರಕ್ಕೆ 200 ಕೋಟಿ ರೂಪಾಯಿ ಅನುದಾನ ಒದಗಿಸಲು ಎಲ್ಲರೂ ಸೇರಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಐದು ಕೋಟಿ ರೂ ವೆಚ್ಚದಲ್ಲಿ ಕಿತ್ತೂರಿನಲ್ಲಿ ಸಾರಿಗೆ ಘಟಕ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನಡೆಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಸವದಿ ಭರವಸೆ ನೀಡಿದರು.