ಬೆಳಗಾವಿ : ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನತೆ ಈ ಬಾರಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದೆ. ಅತಂತ್ರ ಫಲಿತಾಂಶ ನೂರಕ್ಕೆ ನೂರು ಬರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಷ್ಟ್ರ, ರಾಜ್ಯದ ಸರ್ವೇ ಏಜೆನ್ಸಿಗಳು, ಪೊಲೀಸ್ ಗುಪ್ತಚರ ನಮ್ಮದೇ ಪಕ್ಷದ ಪರ ವರದಿ ನೀಡಿವೆ. 120 ಸೀಟ್ ಗೆಲ್ಲುತ್ತೇವೆಂದು ನಾವು ಮುಂಚೆಯೇ ಹೇಳಿದ್ದೆವು. ಅದೇ ವರದಿ ಎಕ್ಸಿಟ್ ಪೋಲ್‌ಗಳು ಕೊಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲಿ 10 ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ದೆವು. 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತೆ: ಕಡಿಮೆ ಕ್ಷೇತ್ರ ಬಂದರೂ ಸರ್ಕಾರ ಮಾಡ್ತೀವಿ ಎಂಬ ಆರ್ ಅಶೋಕ್ ಹೇಳಿಕೆ ವಿಚಾರಕ್ಕೆ ಆಪರೇಷನ್ ಕಮಲ ಮಾಡಲು ಆಗಲ್ಲ, ಬಹಳ ಗ್ಯಾಪ್ ಇದೆ. ಸರ್ಕಾರ ಮಾಡಲು 30 ರಿಂದ 40 ಸೀಟ್ ಅವರಿಗೆ ಬೇಕಾಗುತ್ತೆ. ಅದು ಅಸಾಧ್ಯ. ವಿಪಕ್ಷದಲ್ಲಿ ಕುಳಿತು ಒಳ್ಳೆಯ ಸಲಹೆ ನೀಡುವುದು ಸೂಕ್ತ. ಬಿಜೆಪಿ 75 ರಿಂದ 80 ಕ್ಷೇತ್ರ ಮಾತ್ರ ಬರುತ್ತೆ. ಅತಂತ್ರ ಫಲಿತಾಂಶ ನೂರಕ್ಕೆ ನೂರು ಬರಲ್ಲ. ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಅತಂತ್ರ ಫಲಿತಾಂಶ ಬಂದ್ರೆ ಆಪರೇಷನ್ ಕಮಲ ಆತಂಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲಲ್ಲ. ಜೆಡಿಎಸ್ ಸಹ ಮಧ್ಯದಲ್ಲಿ ಇದೆ. ಜೆಡಿಎಸ್ ಪಾತ್ರ ನಿರ್ಣಾಯಕ ಆಗಬಹುದು ಹೊರತು ಬಿಜೆಪಿ ಪಾತ್ರ ನಿರ್ಣಾಯಕ ಆಗಲ್ಲ. ಪ್ರತಿ ಬಾರಿ ಆಪರೇಷನ್ ಕಮಲ ಸಕ್ಸಸ್ ಆಗಲ್ಲ. ಒಂದು ಸಾರಿ ಮಾಡ್ತಾರೆ, ಎರಡು ಸಾರಿ ಮಾಡ್ತಾರೆ, ಪ್ರತಿ ಸಾರಿ ಆಗಲ್ಲ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.
ಜೆಡಿಎಸ್ ಬಿಜೆಪಿ ಒಳಒಪ್ಪಂದ ಆಗಿದೆಯಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, ನೋಡಬೇಕು ಅದನ್ನ ಹೇಳೋದಕ್ಕೆ ಆಗಲ್ಲ ಎಂದ ಸತೀಶ್ ಜಾರಕಿಹೊಳಿ, ಅವೆಲ್ಲ ಗುಪ್ತವಾಗಿರುವ ವಿಚಾರ, ಬಹಿರಂಗವಾಗಿ ಇರಲ್ಲ. ಅವರು ಏನೇ ಮಾಡಿದರೂ ಕರ್ನಾಟಕ ಜನ ಕಾಂಗ್ರೆಸ್ ಪರ ಇದ್ದಾರೆ ಎಂಬುದು ಸ್ಪಷ್ಟ ಎಂದರು.
ಸ್ಪಷ್ಟ ಚಿತ್ರಣ ಹೊರಗೆ ಬರುತ್ತೆ : ಸಮೀಕ್ಷೆ ಸುಳ್ಳಾಗುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಇನ್ನೊಂದು 20 ಗಂಟೆ ವೇಟ್ ಮಾಡಬೇಕು ಅಷ್ಟೇ. ನಾಳೆ ಒಂದು ಗಂಟೆ ಸುಮಾರಿಗೆ ಸ್ಪಷ್ಟ ಚಿತ್ರಣ ಹೊರಗೆ ಬರುತ್ತೆ. 20 ಗಂಟೆ ನಾವು ಕಾಯೋಣ, ನೀವು ಕಾಯಿರಿ, ಎಲ್ಲರೂ ಕಾಯೋಣ ಎಂದರು.
ಕಡೇ ಕ್ಷಣದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಪ್ರಚಾರ ಮಾಡಿದ್ದರ ಬಗ್ಗೆ, ಬಿಸಿಲಿನಲ್ಲಿ ನಿಂತು ಕೆಲಸ ಮಾಡೋರು ನಾವು. ಇವರು ದಿವಸಕ್ಕೆ ಮೂರು ಡ್ರೆಸ್ ಹಾಕೋರು. ನಾವು ಬೆಳಗ್ಗೆ ಒಂದು ಡ್ರೆಸ್ ಹಾಕಿದ್ರೆ ಹತ್ತು ಸಾರಿ ತೋಯುತ್ತೆ. ಅದರಲ್ಲೇ ಓಡಾಡ್ತೀವಿ ನಾವು. ಜನ ಬಿಸಿಲಲ್ಲಿ, ಇವರು ಏರ್‌ಕಂಡೀಷನ್‌ನಲ್ಲಿ ನಿಂತು ಭಾಷಣ ಮಾಡೋರು. ಅಷ್ಟೇನೂ ತಿಳಿದುಕೊಳ್ಳದೇ ಇರೋ ಜನರಿಲ್ಲ. ತಿಳಿದುಕೊಂಡೇ ಮಾಡ್ತಾರೆ. ಕರ್ನಾಟಕದಲ್ಲಿ ಪ್ರಬುದ್ಧ ಮತದಾರರಿದ್ದು, ತಿಳುವಳಿಕೆಯಿಂದ ಮತ ಹಾಕಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿರುಗೇಟು ಕೊಟ್ಟರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದವರೇ ಸಿಎಂ ಆಗ್ತಾರೆ : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಯಾರು ಸಿಎಂ ಆಗ್ತಾರೆ? ಎಂಬ ಮಾಧ್ಯಮಗಳ ಪ್ರಶ್ನೆಗೆ ಮೊದಲು ನಾಳೆಯ ರಿಸಲ್ಟ್ ಬರಲಿ, 113 ಶಾಸಕರು ಸೇರಿ ಕುಳಿತು ಚರ್ಚೆ ಮಾಡಬೇಕು. ಸಿಎಂ ಯಾರಾಗ್ತಾರೋ ಬಿಡ್ತಾರೋ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದವರೇ ಸಿಎಂ ಆಗ್ತಾರೆ ಅದು ಮುಖ್ಯ ಎಂದು ಸತೀಶ್ ಜಾರಕಿಹೊಳಿ ಗುಟ್ಟು ಬಿಟ್ಟು ಕೊಡಲಿಲ್ಲ.
ಎಂಇಎಸ್ ಗೆ ಮರುಜೀವ ಕೊಟ್ಟಿದ್ದೇ ಅಭಯ ಪಾಟೀಲ: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಎಂಇಎಸ್‌ಗೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂಬ ಅಭಯ್ ಪಾಟೀಲ್ ಹೇಳಿಕೆಗೆ, ಅವನು ಮಾಡಿದ ಅಕ್ರಮ ಕರ್ಮಕಾಂಡದಿಂದ ಜನ ಸೋಲಿಸಲು ಬೆನ್ನುಹತ್ತಿದ್ದಾರೆ ಎಂದು ಅಭಯ್ ಪಾಟೀಲ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ ಸತೀಶ್ ಜಾರಕಿಹೊಳಿ, ನಮ್ಮದು ಕಾಂಗ್ರೆಸ್ ಪಕ್ಷ, ಎಂಇಎಸ್ ಬೇರೆ. ಅವನ ಕಾರ್ಯವೈಖರಿ, ಅಧಿಕಾರಿಗಳು ಪೊಲೀಸರ ದುರುಪಯೋಗದಿಂದ ಜನ ಸೋಲಿಸಲು ಬೆನ್ನುಹತ್ತಿದ್ದಾರೆ. ಅವು ನಮ್ಮ ವೈಫಲ್ಯಗಳಲ್ಲ ಎಂದರು.
ಎಂಇಎಸ್‌ಗೆ ಮರುಜೀವ ಬಂದಿದೆ: ಎಂಇಎಸ್ ಅಸ್ತಿತ್ವ ಹುಟ್ಟಿಕೊಳ್ಳಲು ಅಭಯ್ ಪಾಟೀಲ್ ಕಾರಣ. ಅಭಯ್ ಪಾಟೀಲ್ ವರ್ತನೆ, ಮರಾಠಾ ಜನರ ಮೇಲೆ ಸುಮಾರು ಕೇಸ್ ಹಾಕಿದ್ದು, ತಹಶೀಲ್ದಾರ್ ಕಚೇರಿ, ಸಬ್‌ರಿಜಿಸ್ಟರ್ ಕಚೇರಿಗಳಿಂದ ತೊಂದರೆ ಕೊಟ್ಟಿದ್ದು, ಲೇಔಟ್‌ಗಳಲ್ಲಿ ತೊಂದರೆ ಕೊಟ್ಟಿದ್ದರಿಂದ ಎಂಇಎಸ್‌ಗೆ ಮರುಜೀವ ಬಂದಿದೆ. ಎಲ್ಲ ಪಕ್ಷದವರು ಅಭಯ್ ಪಾಟೀಲ್ ಸೋಲಿಸಲು ನಿರ್ಣಯ ಮಾಡಿದ್ದರು ಎಂದರು.
ಸತೀಶ್ ಜಾರಕಿಹೊಳಿ ಸೋಲಿಸಲು ಯಮಕನಮರಡಿಗೆ ಗುಜರಾತ್ ಟೀಮ್ ಬಂದಿದ್ದ ವಿಚಾರಕ್ಕೆ ಎಲ್ಲ ಕಡೆಯಿಂದ ಬಂದು ಟೂರ್ ಮಾಡಿದ್ರೂ ಯಾವುದೇ ಪ್ರಯೋಗ ಸಕ್ಸಸ್ ಆಗಿಲ್ಲ. ನಮ್ಮ ಮತದಾರರು ಕಾಂಗ್ರೆಸ್ ಹಾಗೂ ನಮ್ಮ ಪರವಾಗಿ ಇದ್ದಾರೆ. ನಮ್ಮ ಕಾರ್ಯಕರ್ತರಿಗೆ ರಾಜ್ಯದಲ್ಲೇ ಅತಿಹೆಚ್ಚು ಲೀಡ್‌ನಿಂದ ಗೆಲ್ಲಿಸಬೇಕು ಅಂತಾ ಹೇಳಿದ್ದೀವಿ. ಈಗಲೂ ಕೂಡ ಆ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಹೊಸ ಸರ್ಕಾರ ರಚನೆ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ : ಮುರುಗೇಶ್ ನಿರಾಣಿ