ಮಂಗಳೂರು: ಸಿಸಿಬಿ ಪೊಲೀಸರ ಹಣಕಾಸು ವಹಿವಾಟು ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಐಷಾರಾಮಿ ಜಾಗ್ವಾರ್ ಕಾರನ್ನು ಸಿಐಡಿ ತನಿಖಾ ತಂಡ ಬೆಂಗಳೂರಿನಲ್ಲಿ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡಿದೆ.
ಜಾಗ್ವಾರ್ ಕಾರು ವಶಪಡಿಸಿಕೊಂಡಿರುವ ಬೆನ್ನಿಗೆ ಮಂಗಳೂರು ಪೊಲೀಸರ ವಶದಲ್ಲಿರುವ ಪೋರ್ಚ್ ಮತ್ತು ಬಿಎಂಡಬ್ಲ್ಯೂ ಕಾರನ್ನು ಕೂಡ ಸಿಐಡಿ ತಂಡ ವಶಕ್ಕೆ ಪಡೆಯಲು ಮುಂದಾಗಿದೆ.
ನೆಲ್ಯಾಡಿಯ ಎಲಿಜಾ ಕಂಪನಿಯ ಕೋಟ್ಯಂತರ ರೂ. ಹಣ ದ್ವಿಗುಣ ವಹಿವಾಟಿಗೆ ಸಂಬಂಧಿಸಿ ಮೂರು ಐಷಾರಾಮಿ ಕಾರು ಬಳಕೆಯಾದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರಲ್ಲಿ ಸಿಸಿಬಿ ಪೊಲೀಸರನ್ನು ಬಳಸಿಕೊಂಡು ಹಣಕಾಸು ವಹಿವಾಟು ನಡೆಸಿರುವ ಬಗ್ಗೆ ಮಂಗಳೂರು ಡಿಸಿಪಿ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಆಧಾರದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ತಂಡ, ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಜಾಗ್ವಾರ್ ಕಾರನ್ನು ಬೆಂಗಳೂರಿನಲ್ಲಿ ಪತ್ತೆಮಾಡಿ ವಶಕ್ಕೆ ಪಡೆದುಕೊಂಡಿದೆ.
ಸಿಸಿಬಿ ಪೊಲೀಸ್ ಪ್ರಕರಣ ಪೈಕಿ ಹಣಕಾಸು ವಹಿವಾಟು ಹಾಗೂ ಕಾರು ಮಾರಾಟ ಪ್ರಕರಣದ ಪ್ರತ್ಯೇಕ ತನಿಖೆಯನ್ನು ಸಿಐಡಿ ತಂಡ ನಡೆಸುತ್ತಿದೆ. ಜಾಗ್ವಾರ್ ಕಾರು ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾರಿನ ಮಾಲೀಕರನ್ನು ಕರೆಸಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸಲಾಗಿದೆ. ಕಾರು ಖರೀದಿಸಿದ ಬಗ್ಗೆ ಮಾಲೀಕರಿಂದ ಮಹತ್ವದ ಮಾಹಿತಿ ಪಡೆದುಕೊಂಡಿದೆ. ಈ ವಿಚಾರ ಈ ಹಿಂದೆಯೇ ಸಿಐಡಿ ತಂಡಕ್ಕೆ ಲಭಿಸಿತ್ತು ಎಂಬುದನ್ನು ಮೂಲಗಳು ಖಚಿತಪಡಿಸಿವೆ.
ಸಿಐಡಿ ಡಿವೈಎಸ್ಪಿ ಶ್ರೀನಿವಾಸ ರಾಜು ಅವರು ಮಂಗಳೂರಿಗೆ ಆಗಮಿಸಿ ಸಿಸಿಬಿ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿ ಮೂರು ಐಷಾರಾಮಿ ಕಾರು ಮಾರಾಟಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಇರುವ ಎರಡು ಕಾರುಗಳನ್ನು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ನಾರ್ಕೋಟಿಕ್ ವಿಭಾಗದ ಹಿಂದಿನ ಅಧಿಕಾರಿಗಳಿಂದಲೂ ಕೆಲ ಮಾಹಿತಿಗಳನ್ನು ಕಲೆಹಾಕಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರು ಮಾರಾಟ ಪ್ರಕರಣದಲ್ಲಿ ನೋಟಿಸ್ ಪಡೆದಿರುವ ಪೊಲೀಸ್ ಬ್ರೋಕರ್, ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ಸಿಐಡಿ ತಂಡ ಅವರ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ.. ಐಷಾರಾಮಿ ಕಾರು ಮಾರಾಟ ಪ್ರಕರಣ: ತನಿಖೆ ಸಿಐಡಿ ಎಸ್ಪಿ ಹಂತಕ್ಕೆ