ಅಥಣಿ(ಬೆಳಗಾವಿ): ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಟ್ಟಣದ ಜೆಇ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಅತೀ ಸರಳವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಇಂದು ಗೌರವಾರ್ಥವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಜತೆಗೂಡಿ ಶಿಕ್ಷಕರ ದಿನಾಚರಣೆ ಆಚರಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೊರಟಗಿ ಮಾತನಾಡಿ, ದೇಶದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆ ಅಪಾರವಾಗಿದೆ. ವಿಶೇಷವಾಗಿ ಶಿಕ್ಷಣ ವಲಯದಲ್ಲಿ ಕ್ರಾಂತಿ ಮಾಡಿರುವ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಇದು ನಮ್ಮ ಸೌಭಾಗ್ಯ ಎಂದು ಹೇಳುತ್ತಾ ಶಿಕ್ಷಕರ ದಿನಾಚರಣೆ ಶುಭಾಶಯ ಕೋರಿದರು. ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ಜೀವನವನ್ನೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮುಡುಪಾಗಿಟ್ಟಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಡಾ.ರಾಧಾಕೃಷ್ಣನ್ ಓರ್ವ ಶ್ರೇಷ್ಠ ತಜ್ಞರಾಗಿದ್ದರು. ಅವರ ಜನ್ಮದಿನವಾದ ಇಂದು ಪ್ರತಿ ವರ್ಷವೂ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, ಡಾ, ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ, ರಾಷ್ಟ್ರಪತಿಗಳಾಗಿ ಭಾರತ ದೇಶಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಆದರ್ಶ ಶಿಕ್ಷಕರಾಗಿ, ಅವರು ನೀಡಿರುವ ಮಾರ್ಗದರ್ಶನ ಅಳವಡಿಸಿಕೊಳ್ಳಬೇಕಾಗಿದೆ. 1962ರಲ್ಲಿ ಭಾರತದ ಶಿಕ್ಷಕರೊಬ್ಬರು ರಾಷ್ಟ್ರಪತಿಯಾಗಿ ನೇಮಕಗೊಂಡರು. ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳು ವ್ಯಾಖ್ಯಾನಿಸುತ್ತಾ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದಿರು. 1954 ರಲ್ಲಿ ಭಾರತ ರತ್ನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಪಂಚಕ್ಕೆ ಅವರ ಸೇವೆ ಅನನ್ಯವಾಗಿದೆ ಎಂದು ಹೇಳಿದರು.