ಚಿಕ್ಕೋಡಿ: ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಠಳ್ಳಿ ಬೆಂಬಲಿಗರ ನಡುವೆ ಟಾಕ್‌ವಾರ್ ಪ್ರಾರಂಭವಾಗಿದ್ದು, ಅಥಣಿ ಬಿಜೆಪಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅಥಣಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಬೆಂಬಲಿಗರ ನಡುವೆ ತೀವ್ರ ಪೈಪೋಟಿ ನಡೆದು, ವಲಸಿಗರು ಹಾಗೂ ಮೂಲ ಬಿಜೆಪಿಗರೆಂಬ ಚರ್ಚೆ ನಡೆಯುತ್ತಿದೆ.
ಸವದಿ ಬೆಂಬಲಿಗರಾದ ಅಣ್ಣಸಾಬ್ ನಾಯಕ ಹಾಗೂ ಮಹೇಶ್ ಕುಮಠಳ್ಳಿ ಬೆಂಬಲಿಗರಾದ ಡಾ.ರವಿ ಸಂಕ ನಡುವೆ ಅಧ್ಯಕ್ಷ ಸ್ಥಾನಕ್ಕೆ ಹಗ್ಗಜಗ್ಗಾಟವಿದೆ. ಈ ನಡುವೆ ಬೆಳಗಾವಿ ಜಿಲ್ಲಾ ಬಿಜೆಪಿ ಮುಖಂಡರು ಡಾ.ರವಿ ಸಂಕ ಅವರನ್ನು ಅಥಣಿ ಮಂಡಲ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಿದ್ದಂತೆ ಸವದಿ ಬಣದಲ್ಲಿ ಗುರುತಿಸಿಕೊಂಡಿರುವ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷನಿಷ್ಠೆಯನ್ನು ಕೆಣಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಸಮರಗಳು ತೀವ್ರವಾಗುತ್ತಿವೆ. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ್ ನೇರ್ಲಿ ನೇತೃತ್ವದಲ್ಲಿ ಅಥಣಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಸಭೆ ನಡೆಸಿ, ಅಂತಿಮವಾಗಿ ಡಾ.ರವಿ ಸಂಕ ಅವರನ್ನು ಅಥಣಿ ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸುತ್ತಿದ್ದಂತೆ ಮೂಲ ಬಿಜೆಪಿಯ ಕೆಲವು ಕಾರ್ಯಕರ್ತರು ರಾಜೇಶ್ ನೇರ್ಲಿ ಅವರ ಜೊತೆ ವಾಗ್ವಾದ ನಡೆಸಿದ ಪ್ರಸಂಗವೂ ನಡೆಯಿತು.
ಇದೇ ವೇಳೆ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜೇಶ್ ನೇರ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಎಂದೂ ಕಡೆಗಣಿಸಿಲ್ಲ. ಇವತ್ತು ಅವರಿಗೆ ಅವಕಾಶ, ಮುಂದೊಂದು ದಿನ ಮತ್ತೊಬ್ಬರಿಗೆ ಅವಕಾಶ ಸಿಗುತ್ತದೆ. ಎಲ್ಲರೂ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನಿಸುವಂತೆ ನೂತನ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ತಿಳಿಸಿದರು.
ಇದನ್ನೂ ಓದಿ: ಗೋಕಾಕ್ ಶಾಸಕರಿಗೆ, ಸವದಿಗೆ ಸಚಿವ ಸಂಪುಟ ಸ್ಥಾನಮಾನ ಕೊಡಲಿ: ಮಹೇಶ್ ಕುಮಠಳ್ಳಿ