ಬೆಳಗಾವಿ : ಚಲಿಸುತ್ತಿದ್ದ ಸ್ವಿಫ್ಟ್ ಕಾರೊಂದರ ಟೈಯರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಹಿನ್ನೆಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ನಡು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಬೆಳಗಾವಿ-ಖಾನಾಪುರ ರಸ್ತೆಯ ಪಂಚಾಮೃತ ಹೋಟೆಲ್ ಮುಂಭಾಗದ ಸ್ಟೇಟ್ ಬ್ಯಾಂಕ್ ಬಳಿ ನಡೆದಿದೆ.
ಅಪಘಾತವಾದ ಸ್ವಿಫ್ಟ್ ಕಾರು ಬೆಳಗಾವಿ ನಗರದಿಂದ ಉದ್ಯಮಬಾಗ್ ಮಾರ್ಗವಾಗಿ ತೆರಳುತ್ತಿತ್ತು. ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಕಾರಿನ ಒಂದು ಬದಿಯ ಟೈರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.
ಆಗ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ನಡು ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ.
ಕಾರು ಪಲ್ಟಿಯಾದ ಹಿನ್ನೆಲೆ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಈ ವೇಳೆ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕಾರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.