ಬೆಳಗಾವಿ: ಗೋಕಾಕ ತಾಲೂಕಿನ ಅರಭಾವಿಯ ದುರದುಂಡೇಶ್ವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ(75) ನಿನ್ನೆ (ಭಾನುವಾರ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾತ್ರಿ ವೇಳೆಯಲ್ಲಿ ಪೂಜೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲಿ ಏಕಾಏಕಿ ಸ್ವಾಮೀಜಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶ್ರೀಗಳು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಿದ್ಧಲಿಂಗೇಶ್ವರ ಸ್ವಾಮೀಜಿ ನಿಧನ ಹೊಂದಿರುವ ವಿಷಯ ತಿಳಿದ ಭಕ್ತ ಸಮೂಹ ಶೋಕಸಾಗರಲ್ಲಿ ಮುಳುಗಿದೆ. ಮಠಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಅಪಾರ ಭಕ್ತರು ಇದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಗದಗ ಡಂಬಳದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಮಠಕ್ಕೆ ದೌಡಾಯಿಸಿದರು.
ಅರಭಾವಿ ಮಠದಲ್ಲಿ ಸ್ವಾಮೀಜಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅರಭಾವಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ನಿರವ ಮೌನ ಆವರಿಸಿದ್ದು, ಶ್ರೀಮಠದ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಗದಗ ಬಳಿ ಸರ್ಕಾರಿ ಬಸ್ -ಟಾಟಾ ಸುಮೋ ನಡುವೆ ಡಿಕ್ಕಿ: ಐದು ಜನ ಸ್ಥಳದಲ್ಲೇ ಸಾವು