ಬೆಳಗಾವಿ: ಕೋವಿಡ್ ರೂಪಾಂತರಿ ತಳಿ 'ಒಮಿಕ್ರೋನ್' ರಾಜ್ಯದ ಆತಂಕಕ್ಕೆ ಕಾರಣವಾಗಿದ್ದು, ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಬೆಳಗಾವಿ ಡಿಸಿ ವೆಂಕಟೇಶ ಕುಮಾರ್ ಸೂಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ಇಡುವಂತೆ ಡಿಸಿ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯಗೊಳಿಸಲಾಗಿದೆ. ಧಾರವಾಡ ಎಸ್‌ಡಿಎಂ ಕಾಲೇಜಿನಲ್ಲಿ ಹೆಚ್ಚಿನ ಕೋವಿಡ್ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ನಿರ್ದೇಶನ ನೀಡಿದ್ದಾರೆ.
ಕೇರಳ, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದ ಒಟ್ಟು 293 ವಿದ್ಯಾರ್ಥಿಗಳು ಬೆಳಗಾವಿಗೆ ಆಗಮಿಸಿ ವಸತಿ ನಿಲಯಗಳಲ್ಲಿ ತಂಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯಿಂದ 200 ಜನರ ಥ್ರೋಟ್ ಸ್ವ್ಯಾಬ್ ಸಂಗ್ರಹಿಸಲಾಗಿದೆ.
ಕಳೆದ 16 ದಿನಗಳಲ್ಲಿ ಹೊರರಾಜ್ಯ, ಜಿಲ್ಲೆಗಳಿಂದ ಬಂದವರ ಮೇಲೆ ನಿಗಾವಹಿಸಲಾಗಿದೆ. ಭಾನುವಾರ ರಜೆಯಿದ್ದು ನಾಳೆಯಿಂದ ಶಾಲಾ ಕಾಲೇಜುಗಳಲ್ಲಿ ರ‌್ಯಾಂಡಮ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಡಿಸಿ ಸೂಚಿಸಿದ್ದಾರೆ.