ಬೆಳಗಾವಿ: ನೈಟ್ ಕರ್ಫ್ಯೂಗೆ ಜಿಲ್ಲೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನಗರ ಪ್ರದೇಶದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ನಗರದ ಖಡೇಬಜಾರ್, ರವಿವಾರ ಪೇಟೆ, ಗಣೇಶಪೇಟೆ, ಶನಿವಾರ ಪೇಟೆ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಮಾರ್ಕೆಟ್ ಠಾಣೆಯ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ 8.30ಕ್ಕೆ ಮೈಕ್ ಹಿಡಿದು ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದರು. ಪೊಲೀಸರು ಅನೌನ್ಸ್‌ಮೆಂಟ್ ಮಾಡುತ್ತಿದ್ದಂತೆ ನಗರ ಪ್ರದೇಶದ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಎಲ್ಲರೂ ತಮ್ಮ ಮನೆಗಳನ್ನು ಸೇರಿದ್ದು, ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಸಾರ್ವಜನಿಕರು ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಏ.29 ರಂದು ನಡೆಯಬೇಕಿದ್ದ ಸಾಮೂಹಿಕ ವಿವಾಹ ರದ್ದು
ಮಾಧ್ಯಮದವರೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಸರ್ಕಾರದ ಮಾರ್ಗಸೂಚಿ ಪಾಲನೆಯಲ್ಲಿ ಜನರು ಸಹಕಾರ ನೀಡಿದ್ದಾರೆ. ಕರ್ಫ್ಯೂಗೆ ಜನರು ಕೂಡ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದರು.
ಮಹಾನಗರ ಪೊಲೀಸ್ ಕಮಿಷನರ್ ಕೆ. ತ್ಯಾಗರಾಜನ್, ಡಿಸಿಪಿ ಮುತ್ತುರಾಜ್ ಹಾಗೂ ಪಾಲಿಕೆ ಆಯುಕ್ತ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೈಟ್ ಕರ್ಫ್ಯೂ ಜಾರಿ ಬಗ್ಗೆ ಪರಿಶೀಲನೆ ನಡೆಸಿದರು.