ಚಿಕ್ಕೋಡಿ/ಬೆಳಗಾವಿ:ಆಕಸ್ಮಿಕವಾಗಿ ಕಬ್ಬಿನ ಬೆಳೆಗೆ ಬೆಂಕಿ ಬಿದ್ದ ಪರಿಣಾಮ 50 ಎಕರೆಗೂ ಹೆಚ್ಚು ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನಲ್ಲಿ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಹಾಗೂ ಮಾಂಜರಿವಾಡಿ ಗ್ರಾಮಕ್ಕೆ ಸೇರಿದ ಜಮೀನಿನ ಕಬ್ಬಿಗೆ ಬೆಂಕಿ ಬಿದ್ದಿದ್ದು, 15ಕ್ಕೂ ಹೆಚ್ಚು ರೈತರು ಕಂಗಾಲಾಗಿದ್ದಾರೆ. ಬೆಂಕಿ ನಂದಿಸಲು ಸ್ಥಳೀಯರು ಹಾಗೂ ನಾಲ್ಕು ಅಗ್ನಿಶಾಮಕ ದಳಗಳು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ, ಕಬ್ಬು ಬೆಳೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಕಬ್ಬು ಬೆಳೆ ನಾಶದಿಂದ ಕಂಗಾಲಾದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿಯಿಂದ ಕಂಗಾಲಾದ ರೈತರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಧಾರವಾಡ: ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಶುಶ್ರೂಷಕಿ