ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಪಾಸಿಂಗ್ ಹೊಂದಿದ ಗೂಡ್ಸ್ ವಾಹನದ ಮೇಲೆ ಕರವೇ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದಾರೆ. ಅಲ್ಲದೇ ವಾಹನದ ಗಾಜು ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆಯಿತು.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಗಳ ಮೇಲೆ ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರತಿಕೃತಿ ದಹನ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಡಿಸಿಪಿ ರವೀಂದ್ರ ಗಡಾದಿ, ಮಾರ್ಕೆಟ್ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಪ್ರತಿಭಟನಾ ಸ್ಥಳದಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: ಜತ್ತ ತಾಲೂಕಿಗೆ ಕರ್ನಾಟಕ ಸಿಎಂ ಆದಷ್ಟು ಬೇಗನೆ ಭೇಟಿ ನೀಡಲಿ : ಮಹಾ ಕನ್ನಡಿಗರ ಆಹ್ವಾನ
ಪ್ರತಿಭಟನೆ ಮಾಡುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಸ್ಥಳದಲ್ಲೇ ಮಹಾರಾಷ್ಟ್ರ ಪಾಸಿಂಗ್ ಇದ್ದ ವಾಹನಕ್ಕೆ ಕಪ್ಪು ಮಸಿ ಬಳಿದು ವೈಪರ್ ಮುರಿದು ಆಕ್ರೋಶ ವ್ಯಕ್ತಪಡಿಸಿದರು. ಗೂಡ್ಸ್ ವಾಹನದ ಮುಂಭಾಗದ ಗಾಜು ಒಡೆಯಲು ಕರವೇ ಕಾರ್ಯಕರ್ತರು ಯತ್ನಿಸಿದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.