ಚಿಕ್ಕೋಡಿ : ಕಾಲೇಜು ಪ್ರಾಂಶುಪಾಲರ ಮತ್ತು ಶಿಕ್ಷಕರ ವಿರುದ್ದ ಸುಳ್ಳು ಆಪಾದನೆ ಹೊರಿಸಿ ಅವಮಾನಿಸಿದ್ದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಾಲೇಜು ಪ್ರಾಂಶುಪಾಲರ ಮತ್ತು ಶಿಕ್ಷಕರ ವಿರುದ್ದ ಸುಳ್ಳು ಆಪಾದನೆ ಹೊರಿಸಿ ಅವಮಾನಿಸಿದ್ದನ್ನು ಖಂಡಿಸಿ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಆಪಾದನೆ ಹೊರಿಸಿದ್ದ ನದಿ ಇಂಗಳಗಾಂವ ಗ್ರಾಮದ ಬಸಪ್ಪಾ ಮುರಗೇಪ್ಪಾ ಚನಗೌಡರ, ಮತ್ತು ಶಿವಪುತ್ರ ಸಂತಿ ಎಂಬುವವರು ಕಾಲೇಜು ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ.
ಈಗ ಆಪಾದನೆ ಹೊರಿಸಿದವರು ಮೊದಲು ಕಾಲೇಜಿನಲ್ಲಿ ಮೂಲ ಸೌಕರ್ಯ ಇಲ್ಲದಿದ್ದಾಗ ಎಲ್ಲಿದ್ದರು, ಪಂಚಾಯಿತಿ ಸದಸ್ಯರು ಕಾಲೇಜಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿಲ್ಲ. ಆಗ ನಮ್ಮ ಶಿಕ್ಷಕರು ತಮ್ಮ ವೇತನದಿಂದ ನಮಗೆ ಮೂಲ ಸೌಕರ್ಯ ಒದಗಿಸಿದ್ದಾರೆ. ವಿದ್ಯಾರ್ಥಿಗಳ ತೊಂದರೆ ಕೇಳವರಿಲ್ಲ. ಆದರೆ, ಈಗ ಶಿಕ್ಷಕರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಈ ಆಪಾದನೆ ಮಾಡಿದವರು ನಮ್ಮ ಶಿಕ್ಷಕರ ಹತ್ತಿರ ಬಂದು ಕ್ಷಮೆ ಕೇಳಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಸುಳ್ಳು ಹೇಳಿಕೆ ನೀಡಿರುವವರು ಬಂದು ಶಿಕ್ಷಕರನ್ನ ಕ್ಷಮೆ ಕೇಳುವವರೆಗೂ ತರಗತಿಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳ ಪ್ರತಿಭಟನೆ ಕೈ ಬಿಟ್ಟು ತರಗತಿಗೆ ಬಂದು ಕುಳಿತುಕೊಳ್ಳಿ ಎಂದು ಹೇಳಿದರು. ವಿದ್ಯಾರ್ಥಿಗಳು ಮಾತ್ರ ಸುಳ್ಳು ಆರೋಪ ಮಾಡಿದವರು ಕ್ಷಮೆ ಕೇಳಲೇ ಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ.