ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹದಿನಾಲ್ಕು ತಾಲೂಕುಗಳಲ್ಲಿ ಚಿಕ್ಕೋಡಿ ಅತಿ ದೊಡ್ಡದು. ಲೋಕಸಭಾ ಕ್ಷೇತ್ರವನ್ನೂ ಹೊಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಗಾಗಿ ದಶಕಗಳಿಂದ ಹೋರಾಟ ನಡೀತಿದೆ. ಈಗ ಅದೇ ಕೂಗ ತುಂಬಾ ಗಟ್ಟಿಯಾಗಿ ಮೊಳಗುತ್ತಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರ ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. 40 ವರ್ಷಗಳಿಂದಲೂ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಅಂತಾ ಇಲ್ಲಿ ಹೋರಾಟಗಾರರು ಅವಿರತ ಕಹಳೆ ಮೊಳಗಿಸ್ತಿದಾರೆ. ಆದರೆ, ಆ ಬಗ್ಗೆ ಸ್ಪಂದಿಸದ ರಾಜ್ಯ ಸರ್ಕಾರ ಈಗ ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಮುಂದಾಗಿದೆ. ಇದು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಾವು ಅಧಿಕಾರಕ್ಕೆ ಬಂದ್ರೇ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಈಡೇರಿಸುವ ವಾಗ್ದಾನ ಮಾಡಿದ್ದರು. ಸ್ವತಃ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪ್ರಧಾನಿ ಮೋದಿ ಭಾಗವಹಿಸಿದ್ದ ಪ್ರಚಾರ ಸಭೆಯಲ್ಲೇ ಚಿಕ್ಕೋಡಿ ಜಿಲ್ಲಾ ರಚನೆಗೆ ಬದ್ಧ ಎಂದಿದ್ದರು. ಆ ಮೇಲೆ ಸಂಸದ ಜೊಲ್ಲೆ ಆ ಬಗ್ಗೆ ತುಟಿ ಬಿಚ್ಚಿಲ್ಲ.
ಹೋರಾಟದ ಹಾದಿ :
1980ರಲ್ಲಿ ಬರೀ ಚಿಕ್ಕೋಡಿ ಅಷ್ಟೇ ಅಲ್ಲ, ಗೋಕಾಕ್‌ನ ಕೂಡ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಅಂತಾ ಹೋರಾಟ ತೀವ್ರತೆಗೊಂಡಿತ್ತು. 1997ರಲ್ಲಿ ಚಿಕ್ಕೋಡಿ ಮತ್ತು ಗೋಕಾಕ್‌ನ ಎರಡೂ ಪ್ರತ್ಯೇಕ ಜಿಲ್ಲೆಗಳನ್ನಾಗಿ ಅಂದಿನ ಸಿಎಂ ಜೆ ಹೆಚ್ ಪಟೇಲ್ ಅಧಿಸೂಚನೆ ಹೊರಡಿಸಿದ್ದರು.ಆದರೆ, ಸ್ಥಳೀಯ ರಾಜಕಾರಣ ಇದಕ್ಕೆ ಅಡ್ಡಿಯಾಯ್ತು. ಈಗಲೂ ಪ್ರತ್ಯೇಕ ಜಿಲ್ಲೆಯ ಕನಸು ನನಸಾಗಿಲ್ಲ.
ಚಿಕ್ಕೋಡಿ ತೊಂದರೆಗಳ ಮಾಹಾಪೂರ:
ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಚಿಕ್ಕೋಡಿಯಲ್ಲಿ ಭಾಷೆಯ ತೊಡಕು ಸಾಕಷ್ಟಿದೆ. ಇಲ್ಲಿನ ಸರ್ಕಾರಿ ಶಾಲೆಗಳು ಶೋಚನೀಯವಾಗಿವೆ. ಆದರೆ, ಶೈಕ್ಷಣಿಕ ಪ್ರಗತಿಯಲ್ಲಿ ಚಿಕ್ಕೋಡಿ ಸಾಧನೆ ಕಡಿಮೆಯಿಲ್ಲ. ಕಬ್ಬು ಈ ಪ್ರದೇಶದ ಪ್ರಮುಖ ಬೆಳೆಯಾದ್ರೂ ತಂಬಾಕು ಬೆಳೆಗಾರರ ಸಂಖ್ಯೆಯೂ ಅಧಿಕ. ನಿರುದ್ಯೋಗದ ಸಮಸ್ಯೆ, ಪದೇಪದೆ ಕೈಕೊಡುವ ವಿದ್ಯುತ್‌ನಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಒಂದ್ಕಡೆ ಪ್ರವಾಹದಿಂದ ಜನ ತತ್ತರಿಸಿದ್ರೇ ಇದೇ ಭಾಗದಲ್ಲಿ ಜನ ಕುಡಿಯೋಕೆ ನೀರಿಲ್ಲದೇ ಪರದಾಡ್ತಾರೆ. ಇದೊಂದೇ ತಾಲೂಕಿನಲ್ಲಿ ಐದು ನದಿಗಳು ಹರಿಯುತ್ತವೆ. ಆದರೆ, ಜನ ಮಳೆಗಾಲದಲ್ಲಿ ನೆರೆ ಮತ್ತು ಬೇಸಿಗೆಯಲ್ಲಿ ಬರ ಎದುರಿಸ್ತಾರೆ.
ಕಬ್ಬು ಬೆಳೆಗಾರರಿಗೆ ಸಕ್ಕರೆ ಯಾವಾಗಲೂ ಕಹಿ :
ಮಂಡ್ಯ ಬಿಟ್ರೇ ರಾಜ್ಯದ ಚಿಕ್ಕೋಡಿ ಉಪವಿಭಾಗದಲ್ಲಿ ಅತೀ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ ಕೆಲವು ಬಂದ್ ಆಗಿದ್ರೇ, ಮತ್ತೆ ಕೆಲ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಕೊಡದೇ ಸತಾಯಿಸ್ತಿವೆ. ಪ್ರತಿ ವರ್ಷ ಇಲ್ಲಿನ ರೈತರು ಇದೇ ಕಾರಣಕ್ಕೆ ಪ್ರತಿಭಟನೆ ನಡೆಸ್ತಾರೆ. ಅಥಣಿ ತಾಲೂಕಿನಲ್ಲಿಯೇ ಆರು ಸಕ್ಕರೆ ಕಾರ್ಖಾನೆಗಳಿವೆ. ಆದರೆ, ಸಕ್ಕರೆಯನ್ನ ಮಾತ್ರ ನೇರ ಮಹಾರಾಷ್ಟ್ರ ಮಾರುಕಟ್ಟೆಗೆ ಸಾಗಿಸಲಾಗುತ್ತೆ.
ಚಿಕ್ಕೋಡಿ ಉಪವಿಭಾಗದಲ್ಲಿ ಇಬ್ಬರು ಸಚಿವರು :
ಈ ಭಾಗದಿಂದ ಲಕ್ಷ್ಮಣ ಸವದಿ ಸಚಿವ ಕಮ್ ಡಿಸಿಎಂ, ಶಶಿಕಲಾ ಜೊಲ್ಲೆ ಮಿನಿಸ್ಟರ್. ಇಷ್ಟಿದ್ರೂ ವಿಜಯನಗರಕ್ಕೆ ಸಿಕ್ಕ ಆದ್ಯತೆ ಚಿಕ್ಕೋಡಿಗೆ ಸಿಗದಿರುವುದು ಸಚಿವರುಗಳ ಅಸಮರ್ಥತೆಗೆ ಹಿಡಿದ ಕೈಗನ್ನಡಿ. ಅಥಣಿಯ ಲಕ್ಷ್ಮಣ ಸವದಿ ಈಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಯೂ ಇದೆ. ಬಳ್ಳಾರಿ ಪ್ರತ್ಯೇಕಿಸುವಾಗ ಚಿಕ್ಕೋಡಿ ಅವರಿಗೆ ನೆನಪಾಗಲಿಲ್ಲವೇ ಅನ್ನೋ ಪ್ರಶ್ನೆಯನ್ನ ಇಲ್ಲಿನ ಹೋರಾಟಗಾರರು ಕೇಳ್ತಿದಾರೆ.ಜೀವ ಹೋಗಲಿ ಚಿಂತೆಯಿಲ್ಲ. ಚಿಕ್ಕೋಡಿ ಜಿಲ್ಲೆ ಆಗಲೇಬೇಕು ಅಂತಿದಾರೆ ಇಲ್ಲಿನ ಹೋರಾಟಗಾರರು. ಸರ್ಕಾರ ಇದಕ್ಕೆ ಸ್ಪಂದಿಸದಿದ್ರೇ ಮುಂದೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನೇ ಹೋರಾಟದ ಮೂಲಕವೇ ನೀಡುವ ಎಚ್ಚರಿಕೆ ನೀಡ್ತಿದಾರೆ. ಇವರ ಈ ಗಟ್ಟಿದನಿ ಆಳೋರ ನಿದ್ದೆಗೆಡಿಸಿದ್ರೂ ಅಚ್ಚರಿಯಿಲ್ಲ.