ಚಿಕ್ಕೋಡಿ: ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಮಾತನ್ನು ತಾಲೂಕಿನ ಯುವ ರೈತ ಸಾಧಿಸಿ ತೋರಿಸಿದ್ದಾನೆ. ಕೇವಲ ತಂಪು ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ ಎನ್ನುವ ಸ್ಟ್ರಾಬೆರಿ ಬೆಳೆಯನ್ನು ಬೆಳೆದು ಯಶಸ್ಸು ಕಂಡಿದ್ದಾನೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನೀಡಸೋಶಿ ಗ್ರಾಮದ ರಮೇಶ ಖಾನಾಪುರೆ ಎಂಬ ರೈತ ಹೊಲದಲ್ಲಿ ಸ್ಟ್ರಾಬೆರಿ ಬೆಳೆದಿದ್ದು, ಇದು ಕೇವಲ ಮಹಾಬಲೇಶ್ವರ ಭಾಗದಲ್ಲಿ ಮಾತ್ರ ಬೆಳೆಯುವ ಬೆಳೆ ಎಂದು ತಿಳಿದಿರುವ ರೈತರಿಗೆ ಇದನ್ನು ಎಲ್ಲಿ ಬೇಕಾದರೂ ಬೆಳೆಯಬಹುದು ಎಂದು ತೋರಿಸಿ ಕೊಟ್ಟಿದ್ದಾನೆ.
ಒಣ ಪ್ರದೇಶದ ಕಪ್ಪು ಭೂಮಿಯಲ್ಲಿ ಕಲರಪುಲ್ ಆಗಿ ಕೆಂಪು ಹಣ್ಣುಗಳ ಸ್ಟ್ರಾಬೆರಿ ಬೆಳೆದ ರೈತ ರಮೇಶ, ತನ್ನ ಜಮೀನಿನಲ್ಲಿ ಮಹಾಬಲೇಶ್ವರದಿಂದ ಸಸಿಗಳನ್ನ ತಂದು ನಾಟಿ ಮಾಡಿದ್ದು ಇಂದು ಸ್ಟ್ರಾಬೆರಿ ಹಣ್ಣು ಬಿಡುತ್ತಿವೆ. ನಿತ್ಯ 40-50 ಕೆಜಿ ಬೆಳೆ ಮಾರುಕಟ್ಟೆಗೆ ಹೋಗುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ತಮಿಳುನಾಡು ಹೀಗೆ ವಿವಿಧ ರಾಜ್ಯಗಳಿಗೆ ಸ್ಟ್ರಾಬೆರಿ ಮಾರುಕಟ್ಟೆಗೆ ರಫ್ತಾಗುತ್ತದೆ. ಒಂದು ಕೆಜಿಗೆ ಕಡಿಮೆ ಎಂದರೂ ಎರಡನೂರು ರೂಪಾಯಿ ಸಿಗುತ್ತದೆ ಎನ್ನುತ್ತಾರೆ ಯುವ ರೈತ ರಮೇಶ.
ಇನ್ನು ರಮೇಶನ ಈ ಸಾಧನೆಗೆ ಕುಟುಂಬಸ್ಥರು ಸಾಥ್ ನೀಡಿದ್ದು, ಜೊತೆಗೆ ನಾಲ್ಕು ಜನರಿಗೆ ಕೆಲಸವನ್ನು ನೀಡುತ್ತಿದ್ದಾನೆ. ಸ್ಟ್ರಾಬೆರಿ ಹಣ್ಣುಗಳನ್ನು ಕಿತ್ತು ಬಾಕ್ಸ್ ಮಾಡಲು ಕೆಲಸಗಾರರು ನಿತ್ಯ ತೊಡಗುತ್ತಿದ್ದು, ಸುಮಾರು ಹದಿನಾಲ್ಕು ಸಾವಿರ ಸಸಿಗಳನ್ನು ನೆಡಲಾಗಿದೆ. ಇಲ್ಲಿ ಸ್ಟ್ರಾಬೆರಿ ಬೆಳೆಯಲ್ಲ ಎಂದು ಹೇಳುತ್ತಿದ್ದರು, ಆದರೆ ನನ್ನ ಮಗ ಧೈರ್ಯದಿಂದ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡಿದ್ದಾನೆ ಎಂದು ತಾಯಿ ಗಂಗವ್ವಾ ಸಂತಸ ವ್ಯಕ್ತಪಡಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಕೈ ಸುಟ್ಟುಕೊಂಡವರೇ ಹೆಚ್ಚು. ಆದರೆ, ಇಲ್ಲೊಬ್ಬ ಯುವ ರೈತ ಕೇವಲ ತಂಪು ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ ಎನ್ನುವ ಸ್ಟ್ರಾಬೆರಿ ಬೆಳೆಯನ್ನು ಬೆಳೆದು ಯಶಸ್ಸು ಕಂಡಿದ್ದಾನೆ. ರೈತ ರಮೇಶ ಖಾನಾಪುರೆ ಸಾಧನೆ ಇನ್ನುಳಿದ ರೈತರಿಗೆ ಮಾದರಿಯಾಗಿದೆ.