ಬೆಳಗಾವಿ: ಎರಡನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸ್ಟಾರ್ ಏರ್ಲೈನ್ಸ್ ಸಂಸ್ಥೆಯಿಂದ ಬೆಳಗಾವಿ-ನಾಸಿಕ್ ಮಾರ್ಗ ಮಧ್ಯೆ ನೇರ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಸ್ಟಾರ್ ಏರ್ಲೈನ್ಸ್ ನಿರ್ದೇಶಕ ಶ್ರೇಣಿಕ್ ಘೋಡಾವತ್ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ನಾಸಿಕ್ಗೆ ನೇರ ವಿಮಾನ ಸೇವೆ ಇಂದಿನಿಂದಲೇ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ಸ್ಟಾರ್ ಏರ್ಲೈನ್ಸ್ ತನ್ನ ಸೇವೆ ವಿಸ್ತರಿಸುತ್ತಿದೆ ಎಂದರು.
ಸ್ಟಾರ್ ಏರ್ಲೈನ್ಸ್ ಈಗಾಗಲೇ ಅಹ್ಮದಾಬಾದ್, ಅಜ್ಮೀರ್, ಬೆಂಗಳೂರು, ದೆಹಲಿ, ಬೆಳಗಾವಿ, ಹುಬ್ಬಳ್ಳಿ, ತಿರುಪತಿ, ಇಂದೋರ್, ಕಲಬುರಗಿ, ಮುಂಬೈ, ಸೂರತ್ ಸೇರಿ 13 ಸ್ಥಳಗಳಿಗೆ ನಿತ್ಯ 26 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ನಾಸಿಕ್ಗೂ ವಿಮಾನ ಸೇವೆ ವಿಸ್ತರಿಸಲಾಗಿದೆ. ಎರಡು ವರ್ಷದ ಅವಧಿಯಲ್ಲಿ ಸ್ಟಾರ್ ಏರ್ಲೈನ್ಸ್ ನಲ್ಲಿ 1.6 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಸ್ಟಾರ್ ಏರ್ಲೈನ್ಸ್ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗಿದೆ ಎಂದು ಅಭಿಪ್ರಾಯಪಟ್ಟರು.
ಓದಿ : ಖಾತೆ ಬದಲಾವಣೆ ಕುರಿತು ಯಾವುದೇ ಅಸಮಾಧಾನವಿಲ್ಲ: ಸಚಿವ ಆನಂದ್ ಸಿಂಗ್ ಸ್ಪಷ್ಟನೆ
ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಸ್ಟಾರ್ ಏರ್ಲೈನ್ಸ್ ಪಾಲಿಸುತ್ತಿದೆ. ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸಂಸ್ಥೆಯಿಂದಲೇ ಪ್ರಯಾಣಿಕರಿಗೆ ಫೇಸ್ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುತ್ತಿದೆ ಎಂದರು.