ಬೆಳಗಾವಿ: ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆ ಬೆಳಗಾವಿಯಲ್ಲಿ ಶ್ರೀರಾಮಚಂದ್ರನ ಟ್ಯಾಟೂ ಅಭಿಯಾನ ಗಮನ ಸೆಳೆಯುತ್ತಿದ್ದು, ಶ್ರೀರಾಮನ ಭಕ್ತರು ಟ್ಯಾಟೂ ಹಾಕಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಉಚಿತ ಟ್ಯಾಟೂ ಅಭಿಯಾನ ಶುರುವಾಗಿದ್ದು, ಬೆಳಗಾವಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಮೂರು ಕಡೆಗಳಲ್ಲಿ ಟ್ಯಾಟೂ ಕೇಂದ್ರಗಳನ್ನು ತೆರೆಯಲಾಗಿದೆ. ಬಿಪಿ, ಶುಗರ್ ಸೇರಿದಂತೆ ಅನಾರೋಗ್ಯ ಇರದ ವ್ಯಕ್ತಿಗಳಿಗೆ ಕನ್ನಡ, ಹಿಂದಿ, ಮರಾಠಿ ಬರಹದೊಂದಿಗೆ ಶ್ರೀರಾಮನ ಭಾವಚಿತ್ರವಿರುವ ಹಚ್ಚೆ ಹಾಕಲಾಗುತ್ತಿದೆ. ಜನವರಿ 22ರವರೆಗೆ 10 ಸಾವಿರಕ್ಕೂ ಅಧಿಕ ಶ್ರೀರಾಮ ಭಕ್ತರಿಗೆ ನುರಿತ ಟ್ಯಾಟೂ ಕಲಾವಿದರಿಂದ ನಿರಂತರವಾಗಿ ಉಚಿತ ಟ್ಯಾಟೂ ಕಾರ್ಯ ಮಾಡಲಾಗುತ್ತಿದೆ.
ಈ ಅಭಿಯಾನಕ್ಕೆ ನಿರೀಕ್ಷೆಗೆ ಮೀರಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳೆಯರು ಕೂಡ ಟ್ಯಾಟೂ ಹಾಕಿಸಿಕೊಳ್ಳಲು ಜಾಸ್ತಿ ಸಂಖ್ಯೆಯಲ್ಲಿ ಕೇಂದ್ರಗಳಿಗೆ ಬರುತ್ತಿದ್ದಾರೆ. ಈ ಬಗ್ಗೆ ಶಾಸಕ ಅಭಯ ಪಾಟೀಲ ಮಾತನಾಡಿ, ಭಗವಾನ್ ರಾಮ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾನೆ. ಈಗ ಕೈಯಲ್ಲೂ ಶಾಶ್ವತವಾಗಿ ಭಾವಚಿತ್ರ ಇರಲೆಂದು ಟ್ಯಾಟೂ ಹಾಕಲಾಗುತ್ತಿದೆ. ನಾವು 10 ಸಾವಿರ ಜನರ ಗುರಿ ಇಟ್ಟುಕೊಂಡಿದ್ದೆವು. ಆದರೆ, ಸುಮಾರು 20 ಸಾವಿರ ಜನ ಆಗಬಹುದು. ಜ.23ರವರೆಗೂ ಇದು ಮುಂದುವರಿಯಲಿದೆ. ಇದೊಂದು ಇಡೀ ದೇಶದಲ್ಲೆ ವಿನೂತನ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.
ರಾಮ ಭಕ್ತ ವಿಠಲ ಎಂಬುವವರು ಮಾತನಾಡಿ, ಶ್ರೀರಾಮನ ಟ್ಯಾಟೂ ತುಂಬಾ ಖುಷಿಯಿಂದ ಹಾಕಿಸಿಕೊಳ್ಳುತ್ತಿದ್ದು ಇದರಿಂದ ರಾಮನೇ ನಮ್ಮ ದೇಹದಲ್ಲಿ ಬಂದಂತೆ ಭಾಸವಾಗುತ್ತಿದೆ. ನಮ್ಮ ತಂದೆ, ಅಜ್ಜ ಕಂಡ ಕನಸು ಇದೇ ಜ.22ಕ್ಕೆ ನನಸಾಗುತ್ತಿದೆ. ಇದನ್ನು ಸಾಕಾರಗೊಳಿಸಿದ್ದು ಪ್ರಧಾನಿ ಮೋದಿ ಅವರು ಎಂದು ಹರ್ಷ ವ್ಯಕ್ತಪಡಿಸಿದರು. ರೇಣು ಪೆಡನೇಕರ್ ಮಾತನಾಡಿ, ಶ್ರೀರಾಮಚಂದ್ರನ ಮೇಲೆ ನಮಗೆ ಬಹಳ ಅಭಿಮಾನ ಮತ್ತು ಭಕ್ತಿ. ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವ ಸವಿ ನೆನಪಿಗೋಸ್ಕರ ಕೈಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೇವೆ. ಐದನೂರು ವರ್ಷದ ಬಳಿಕ ರಾಮ ನಮ್ಮ ಮನೆಗೆ ಬರುತ್ತಿರುವುದಕ್ಕೆ ತುಂಬಾ ಸಂತೋಷ ಆಗುತ್ತಿದೆ. ಮೋದಿ ಅವರಿಗೆ ನಾವು ತುಂಬಾ ಆಭಾರಿ ಆಗಿದ್ದೇವೆ ಎಂದರು.
ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಅಂದು ಭವ್ಯ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಮಧ್ಯಾಹ್ನ 12.28 ರಿಂದ 12.30ರ ನಡುವೆ ನಡೆಯಲಿದೆ.
ಇದನ್ನೂ ಓದಿ: ಪ್ರಾಣ ಪ್ರತಿಷ್ಠಾಪನೆ: ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ