ಬೆಳಗಾವಿ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಬೇಗ ಗುಣಮುಖರಾಗಲೆಂದು ಅವರ ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.
ಮುಂಜಾನೆ 6.30ಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ್, ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಶಿವಾಜಿ ಕುರಿ ಮತ್ತು ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಕರಡಿಗುದ್ದಿ ಗ್ರಾಮದ ಮಹಿಳೆಯರು, ನಾಗರಿಕರು ಜಡಿಸಿದ್ದೇಶ್ವರ ದೇವರಿಗೆ ಅಭಿಷೇಕ ಮಾಡಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಚನ್ನರಾಜ್ ಹಟ್ಟಿಹೊಳಿ ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಶಿಂದೋಳ್ಳಿ ಗ್ರಾಮಸ್ಥರು ಸಹ ಗ್ರಾಮದ ಕರಿಸಿದ್ದೇಶ್ವರ ಮತ್ತು ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಹೆಬ್ಬಾಳ್ಕರ್ ಕೃತಜ್ಞತೆ
ತಮ್ಮ ಆರೋಗ್ಯದ ಕುರಿತಂತೆ ಕಾಳಜಿ ತೋರಿಸುತ್ತಿರುವ ಜನರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಚನ್ನರಾಜ ಹಟ್ಟಿಹೊಳಿ ಕೃತಜ್ಞತೆ ಸಲ್ಲಿಸಿದ್ದು, ಜನರೂ ಸಹ ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿಕೊಳ್ಳುವಂತೆ ವಿನಂತಿಸಿದ್ದಾರೆ.
ನಾನು ಹಾಗೂ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಕೊರೊನಾ ಸೋಂಕಿನಿಂದ ಹೋಂ ಕ್ವಾರಂಟೈನ್ ಆಗಿದ್ದು, ಆದಷ್ಟು ಬೇಗ ಗುಣಮುಖವಾಗಿ ಎಂದಿನಂತೆ ನಿಮ್ಮ ಜೊತೆ ಬೆರೆಯಲು ಕಾತುರರಾಗಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ, ಕರೆಗಳ ಮೂಲಕ ಹಾಗೂ ವಾಟ್ಸ್ಆ್ಯಪ್ ಗಳಲ್ಲಿ ನಿಮ್ಮೆಲ್ಲರ ಕಾಳಜಿ, ಕನಿಕರ, ಹಾರೈಗಳಿಗೆ ನನ್ನ ಮನಸ್ಸು ತುಂಬಿ ಬರುತ್ತಿದೆ. ನಾನು ಈ ಕ್ಷೇತ್ರದ ಶಾಸಕಿಯಾಗಿದ್ದಕ್ಕೆ ಸಾರ್ಥಕ ಎನಿಸುತ್ತಿದೆ. ಕ್ಷೇತ್ರದಲ್ಲಿ ನೀವು ದೇವಸ್ಥಾನಗಳಿಗೆ ತೆರಳಿ ಪೂಜೆ, ಪುನಸ್ಕಾರಗಳ ಮೂಲಕ ನನ್ನ ಹಾಗೂ ಸಹೋದರನ ಒಳಿತಿಗಾಗಿ ಹಾರೈಸುತ್ತಿರುವುದು ನಮ್ಮ ಪೂರ್ವಜನ್ಮದ ಪುಣ್ಯವೆನಿಸುತ್ತಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಾರೈಕೆಗಳ ಮೂಲಕ ಆದಷ್ಟೂ ಬೇಗ ಕ್ಷೇತ್ರಕ್ಕೆ ಮರಳಿ ನಿಮ್ಮ ಜೊತೆ ಬೆರೆಯಲಿದ್ದೇನೆ ಹಾಗೂ ನಿಮ್ಮೆಲ್ಲರ ಹಾರೈಕೆಗಳಿಗೆ ನಾನೆಂದೂ ಚಿರಋಣಿ ಎಂದು ತಿಳಿಸಿದ್ದಾರೆ.