ಬೆಳಗಾವಿ : ಏ ಬಸವರಾಜು, ಎಲ್ಲಿ ಹೋದೆಯೋ ನನ್ ಮಗನೇ... ನಿನ್ನ ಮುಖ ತೋರಿಸ್ಬಾರೋ ಯಪ್ಪಾ... ನಿನ್ ಮುಖ ನೋಡ್ದ ನಾ ಬದುಕಾಂಗಿಲ್ಲೋ ಯಪ್ಪಾ... ಹೀಗೆ ಮಗನನ್ನು ಕಳೆದುಕೊಂಡ ಹೆತ್ತ ತಾಯಿಯೊಬ್ಬಳು ಎದೆ ಬಡಿದುಕೊಳ್ಳುತ್ತಾ ರೋದಿಸುತ್ತಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.
ಉತ್ತರ ಕರ್ನಾಟಕದ ಭೀಕರ ಮಳೆ ಆವಾಂತರ ಸೃಷ್ಟಿಸಿ ಜನರ ಬದುಕನ್ನು ಬೀದಿಗೆ ತಳ್ಳಿದ್ದಂತು ಸುಳ್ಳಲ್ಲ. ಪ್ರವಾಹದಿಂದ ತಪ್ಪಿಸಿಕೊಳ್ಳಲು ನದಿ ದಾಟಿ ಹೋಗುವ ಸಂದರ್ಭದಲ್ಲಿ ಹೆತ್ತ ಮಗ ಕಣ್ಮುಂದೆಯೇ ನೀರುಪಾಲಾದ ಘಟನೆ ನಡೆದಿದ್ದು ಕಳೆದ ಎಂಟು ದಿನಗಳಿಂದ ಮಗನ ಮುಖಕ್ಕೆ ಹಾತೊರೆಯುತ್ತಿರುವ ತಾಯಿಯ ರೋದನೆ ಇದೀಗ ಮುಗಿಲು ಮುಟ್ಟಿದೆ.
ಕಳೆದ ಎಂಟು ದಿನಗಳ ಹಿಂದೆ ಪ್ರವಾಹ ಉಂಟಾದ ಸಮಯದಲ್ಲಿ ಊರ ಹೊರಗೆ ಹೋಗುವಾಗ ಕಣ್ಮುಂದೆಯೇ ಮಗ ಬಸವರಾಜು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ಅವತ್ತಿನಿಂದ ತಾಯಿ ಲಲಿತಾ ಕಣ್ಣೀರು ಹಾಕುತ್ತಾ ತುತ್ತು ಅನ್ನ ತಿನ್ನದೆ ರೋದಿಸುತ್ತಿರುವ ಘಟನೆ ಎಲ್ಲರ ಕರುಳು ಹಿಂಡುವಂತಿದೆ.
ಲಲಿತಾ ಬಡ ಕುಟುಂಬದ ಹೆಣ್ಣುಮಗಳು. ಗಂಡ ಸತ್ತು ಆರು ತಿಂಗಳು ಸಹ ಕಳೆದಿಲ್ಲ. ಈಗ ಕಣ್ಣ ಮುಂದೆಯೇ ಮಗ ಬಸವರಾಜು ಹೆಣವಾಗಿದ್ದು ತಾಯಿ ಕರುಳು ಹಿಂಡುತ್ತಿದೆ. ಅವರಿಗೆ ಮೂರು ಮಕ್ಕಳು. ಅದರಲ್ಲಿ ಮಗ ಬಸವರಾಜು ಕಣ್ಮುಂದೆಯೇ ತೇಲಿ ಹೋದದ್ದು ತಾಯಿಯ ಮಮತೆಯ ಕಟ್ಟೆ ಒಡೆದು ಹೋಗಿದೆ.
ನನಗೆ ಸರ್ಕಾರದಿಂದ ಯಾವುದೇ ಹಣ ಬೇಡ, ನನ್ನ ಮಗನ ಮುಖ ತೋರಿಸಿದರೆ ಸಾಕು. ಮಗ ಇಲ್ಲದೆ ಅವನ ಪಂಚನಾಮೆ ಮಾಡಿದ್ದು ನನ್ನ ಹೊಟ್ಟೆಯೊಳಗೆ ಬೆಂಕಿ ಬೀಳುತ್ತಿದೆ ಎಂದು ಅರಚುವ ಹೆಣ್ಣುಮಗಳನ್ನು ನೋಡಿದರೆ ಎಂತಹ ಕಲ್ಲು ಹೃದಯ ಕರಗುವುದಂತು ಸುಳ್ಳಲ್ಲ.
ಒಟ್ಟಿನಲ್ಲಿ ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ಜನರ ಬದುಕು ಸರ್ವನಾಶವಾಗಿದ್ದು ಜನರ ಗೋಳು ಹೇಳತೀರದಾಗಿದೆ. ಇದ್ದೊಬ್ಬ ಮಗನು ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ತಾಯಿಯ ರೋದನೆ ಮುಗಿಲು ಮುಟ್ಟಿದೆ. ಇಗಲಾದರು ಸರ್ಕಾರ ಎಚ್ಚೆತ್ತು ಹುಡುಗನ ಶವ ಹುಡುಕಿ ತಾಯಿಯ ಮಡಿಲು ಶಾಂತಗೊಳಿಸಬೇಕು ಎಂಬುದೆ ಎಲ್ಲರ ಆಶಯ.