ಅಥಣಿ(ಬೆಳಗಾವಿ): ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದ ಮಗನನ್ನು ಹಿಡಿದು ಪೊಲೀಸರು ಮತ್ತು ಸಾರ್ವಜನಿಕರು ಬುದ್ಧಿವಾದ ಹೇಳಿದ ಘಟನೆ ನಗರದಲ್ಲಿ ನಡೆದಿದೆ.
ಸ್ಥಳಿಯ ನಿವಾಸಿ ಶ್ರೀಧರ್ ಆರ್. ಸೋಳಸಿ ಎಂಬಾತ ಹೆತ್ತ ತಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದ. ಇದನ್ನ ಗಮನಿಸಿದ ಸಾರ್ವಜನಿಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ನಗರ ಪೊಲೀಸರು ಹಾಗೂ ಜನರು ಬುದ್ಧಿವಾದ ಹೇಳಿ ಕಳಿಸಿದ್ದಾರೆ.
ಘಟನೆ ವಿವರ: ಮಹಿಳೆಯ ಮಗ ಶ್ರೀಧರ ಮಹಾರಾಷ್ಟ್ರದ ಪುಣೆಯಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ತಾಯಿ-ಮಗ ಪುಣೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಅಥಣಿಗೆ ಬಂದಿದ್ದರು.
ಶ್ರೀಧರನು ತಾಯಿಗೆ ಮಾನಸಿಕವಾಗಿ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಅಥಣಿ ಸಾರ್ವಜನಿಕ ಆಸ್ಪತ್ರೆ ಮುಂದೆ ಬಿಟ್ಟು ಹೋಗಲು ಪ್ರಯತ್ನಿಸಿದ್ದಾನೆ ಎನ್ನಲಾಗ್ತಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ತಲೆಹಾಕಿ ಶ್ರೀಧರ ಕಡೆಯಿಂದ ತಪ್ಪೊಪ್ಪಿಗೆ ಮುಚ್ಚಳವನ್ನು ಬರೆಸಿಕೊಂಡು, ಮುಂದೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿ ತಾಯಿಯೊಂದಿಗೆ ಮಗನನ್ನು ಕಳುಹಿಸಿಕೊಟ್ಟಿದ್ದಾರೆ.