ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಚುರುಕು ಪಡೆದಿದ್ದು, ಸಂಚಾರ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ನಗರದ ಎಲ್ಲೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಕುಂದಾನಗರಿ ಧೂಳು ನಗರಿಯಾಗಿ ಪರಿವರ್ತನೆಗೊಂಡಿದೆ.
ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ಕುಂದಾನಗರಿ ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿತ್ತು. ಆದರೆ, ಆರಂಭದ ಮೂರು ವರ್ಷಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿರಲಿಲ್ಲ. ಇದೀಗ ಕಳೆದೊಂದು ವರ್ಷದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ವೇಗ ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಪರಿಣಾಮ ಸಂಚಾರ ಸಮಸ್ಯೆ ತಲೆದೂರಿದೆ. ಇದರಿಂದ ಪ್ರಯಾಣಿಕರು, ನಗರವಾಸಿಗಳು ಹೈರಾಣಾಗಿದ್ದಾರೆ.
ಹೌದು, ಅತ್ಯಾಧುನಿಕ ಸವಲತ್ತು, ಸಾರ್ವಜನಿಕರಿಗೆ ಅತ್ಯುತ್ತಮ ಜೀವನಮಟ್ಟ ನೀಡಬೇಕು ಎಂಬ ಕನಸಿನೊಂದಿಗೆ ಹುಟ್ಟಿಕೊಂಡ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ 2019ರಲ್ಲಿ ಜಾರಿಗೆ ತಂದು 2021 ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಯೋಜನೆಗಳನ್ನ ಮುಗಿಸಲು ಕೇಂದ್ರ ಸರ್ಕಾರ ಗಡುವು ವಿಧಿಸಿತ್ತು.
ಆದರೆ, ಕುಂದಾನಗರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷ ಕಳೆದರೂ ಅರ್ಧದಷ್ಟು ಕಾಮಗಾರಿಗಳು ಈವರೆಗೂ ಪೂರ್ಣಗೊಳ್ಳುವ ಹಂತಕ್ಕೆ ತಲುಪಿಲ್ಲ. ಪರಿಣಾಮ, ಸ್ಮಾರ್ಟ್ ಸಿಟಿ ಯೋಜನೆಗಿಟ್ಟ ಅನುದಾನವನ್ನು 2021ರ ಮಾರ್ಚ್ ತಿಂಗಳ ಅಂತ್ಯಕ್ಕೆ ಬಳಸಿಕೊಳ್ಳದಿದ್ದರೆ, ಹಣ ಕೈ ತಪ್ಪಲಿದೆ ಎಂಬ ಕಾರಣಕ್ಕೆ ಇದೀಗ ಮಹಾನಗರದಲೆಲ್ಲ ಏಕಕಾಲಕ್ಕೆ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ ಮಹಾನಗರದ ಜನರು ಸುಗಮ ಸಂಚಾರವಿಲ್ಲದೇ ಪರದಾಡುವಂತಾಗಿದೆ.
ಟ್ರಾಫಿಕ್ ಸಮಸ್ಯೆ: ಕೇಂದ್ರ ಬಸ್ ನಿಲ್ದಾಣದಿಂದ ಮಹಾರಾಷ್ಟ್ರ, ಗೋವಾ, ವಿಜಯಪುರ, ಬಾಗಲಕೋಟೆ ಸೇರಿದಂತೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ನಿತ್ಯ ಸಾವಿರಾರು ಬಸ್‌ಗಳು ಓಡಾಡುತ್ತವೆ. ಆದ್ರೆ, ಕಳೆದ ನಾಲ್ಕು ವರ್ಷಗಳ ಹಿಂದೆಯೇ ಆರಂಭವಾದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ಮಾತ್ರ ಈವರೆಗೂ ಮುಗಿಯವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಪರಿಣಾಮ, ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಜನರಿಗೆ ತೊಂದರೆ ಆಗದಂತೆ ಆದಷ್ಟು ಬೇಗ ಸ್ಮಾರ್ಟ್ ಸಿಟಿ ಯೋಜನೆ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಮುಗಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.
ಕಾಮಗಾರಿಗಳ ವಿವರ: ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಮುಖ ರಸ್ತೆಗಳನ್ನ ಸ್ಮಾರ್ಟ್ ರಸ್ತೆಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಅಲ್ಲಿ ಪುಟ್‌ಪಾತ್, ಸೈಕಲ್ ಟ್ರ್ಯಾಕ್, ಲೈಟಿಂಗ್ ವ್ಯವಸ್ಥೆ, ಹಾಗೂ ಗಾಡರ್ನ್ಗಳ ಅಭಿವೃದ್ಧಿ, ಕೆರೆಗಳು, ಹಾಗೂ ಸಿಬಿಟಿ ಬಸ್ ನಿಲ್ದಾಣವನ್ನು 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ್ ಮಾಹಿತಿ ನೀಡಿದರು.
ಕಮಾಂಡೆಂಟ್ ಕಂಟ್ರೋಲ್ ಸೆಂಟರ್, ಪ್ರಮುಖ ಸೈಕಲ್ ಟ್ರ್ಯಾಕ್ ಅಭಿವೃದ್ಧಿ, ಪುಟ್‌ಪಾತ್ ಅಭಿವೃದ್ಧಿ, ಇಂಟರ್ನಲ್ ರಸ್ತೆಗಳನ್ನು ಪೇವರ್ ರಸ್ತೆಗಳಾಗಿ ಪರಿವರ್ತನೆ, 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ಪೂರ್ಣಗೊಳಿಸಿ ಇಲಾಖೆಗೆ ಒಪ್ಪಿಸಲಾಗಿದ್ದು, 10 ಹಾಸಿಗೆವುಳ್ಳ ಆಸ್ಪತ್ರೆ ಕಟ್ಟಡ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಸ್ಕೂಲ್, ಅಂಗನವಾಡಿ ಅಭಿವೃದ್ಧಿ ಹೀಗೆ ಹತ್ತು ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಇದಲ್ಲದೇ ಕಾಲೇಜು ರಸ್ತೆ, ಬಸ್ ನಿಲ್ದಾಣ ರಸ್ತೆ, ಕೆಎಲ್‌ಇ ರಸ್ತೆ, ಕೊಲ್ಲಾಪೂರ ಸರ್ಕಲ್ ರಸ್ತೆ ಸೇರಿ ಅನೇಕ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರ ಜೊತೆಗೆ ಅಂಡರ್ ಗ್ರೌಂಡ್, ಎಲ್‌ಟಿ ವಿದ್ಯುತ್ ಕೇಬಲ್ ಅಳವಡಿಕೆ, ವಿವಿಧ ಕಡೆಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗುತ್ತಿದೆ. ಈವರೆಗೆ ಸ್ಮಾರ್ಟ್ ಸಿಟಿ ಯೋಜನೆಗೆ 312 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಇನ್ನೂ 600 ಕೋಟಿ ರೂ.ಗಳು ವೆಚ್ಚದ ಕಾಮಗಾರಿಗೆ ಕೇಂದ್ರ ಸರ್ಕಾರದ ಅನುದಾನ ಬರಬೇಕಿದೆ ಎಂದು ಮಾಹಿತಿ ನೀಡಿದರು.