ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕರೆ, ಈಗಿರುವ ಮೀಸಲಾತಿ ಕೈತಪ್ಪುತ್ತದೆ ಎಂದು ಕೆಲವರು ಹೇಳುತ್ತಿರುವುದು ಶುದ್ಧ ಸುಳ್ಳು. ನಾವು ಪ್ರತ್ಯೇಕ ಧರ್ಮದ ಹೋರಾಟ ಆರಂಭಿಸಿದ ಮೊದಲ ದಿನದಿಂದಲೂ ತಮ್ಮ ಅಸ್ತಿತ್ವ ಮತ್ತು ಸ್ವಾರ್ಥಕ್ಕಾಗಿ ಈ ರೀತಿ ಅಪಪ್ರಚಾರ ಮಾಡುತ್ತಲೇ ಇದ್ದಾರೆ, ಇದು ಅನ್ಯಾಯ ಎಂದು ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಕಿಡಿಕಾರಿದರು.
ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ರೈಸ್ತರು, ಮುಸ್ಲಿಮರು, ಜೈನರು ಸೇರಿದಂತೆ ಇತರ ಸಮುದಾಯದವರೂ ಕರ್ನಾಟಕ ರಾಜ್ಯದ ಒಬಿಸಿ ಪಟ್ಟಿಯಲ್ಲಿದ್ದಾರೆ. 2ಬಿ ನಲ್ಲಿ ಮುಸ್ಲಿಮರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ಇದೆ. 3ಬಿ ನಲ್ಲಿ ಜೈನರು, ಕ್ರೈಸ್ತರು, ಲಿಂಗಾಯತರಿದ್ದಾರೆ. ಈ ಪೈಕಿ ಕ್ರಿಶ್ಚಿಯನ್, ಮುಸ್ಲಿಂ, ಜೈನರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕ ನಂತರವೂ ಅವರು ಮೀಸಲಾತಿ ಪಟ್ಟಿಯಲ್ಲಿ ಯಾಕೆ ಬರಬೇಕು ಎಂದು ಪ್ರಶ್ನಿಸಿದರು.
ಇದೇ ರೀತಿ ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ಅದೇ ಪಟ್ಟಿಯಲ್ಲಿ ಹೆಸರು ಬರುತ್ತದೆ. ಆದರೆ, ದುರುದ್ದೇಶದಿಂದ ಕೆಲವು ಕುತಂತ್ರಿಗಳು ಮೀಸಲಾತಿ ಕೈತಪ್ಪುತ್ತದೆ ಎಂದು ವಿನಾಕಾರಣ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಜಾತಿಗೆ ಮೀಸಲಾತಿ ಕೊಡಲು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ ಆಧಾರವಾಗಿರುತ್ತದೆ. ಪ್ರತ್ಯೇಕ ಧರ್ಮದ ಮಾನ್ಯತೆ ಕೊಟ್ಟರೆ, ಮೀಸಲಾತಿಯಿಂದ ಲಿಂಗಾಯತ ಸಮುದಾಯದ ಒಳಪಂಗಡಗಳಿಗೆ ಮೀಸಲಾತಿ ಕೈ ತಪ್ಪುವುದಿಲ್ಲ. ಹಾಗಾಗಿ ಸಮುದಾಯದವರು ಆತಂಕಕ್ಕೆ ಒಳಗಾಗಬಾರದು ಎಂದು ಜಾಮದಾರ ಮನವಿ ಮಾಡಿದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ, ಹೋರಾಟ ನಡೆಸಿದ ಬಗ್ಗೆ ಮಾತನಾಡಿದ ಅವರು, ಸಾವಿರಾರು ವಾಹನಗಳು ಓಡಾಡುವ ನಡುರಸ್ತೆಯಲ್ಲಿ ಇಷ್ಟಲಿಂಗ ಪೂಜೆ ಮಾಡುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದನ್ನು ತಡೆಯಲು ಬಂದ ಪೊಲೀಸರ ಮೇಲೆಯೇ ದಬ್ಬಾಳಿಕೆ ಮಾಡಿ, ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸುವುದು ಎಷ್ಟು ಸರಿ. ಬುದ್ಧಿವಂತರಾಗಿರುವ ಸ್ವಾಮೀಜಿ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯಾವುದೇ ಸಮುದಾಯದವರು ಮೀಸಲಾತಿ ಕೇಳುವುದು, ಸರ್ಕಾರದ ಮೇಲೆ ಒತ್ತಡ ಹೇರುವುದು ತಪ್ಪಲ್ಲ ಮತ್ತು ಅದನ್ನು ನಾವೂ ವಿರೋಧಿಸುವುದೂ ಇಲ್ಲ. ಆದರೆ, ಮೀಸಲಾತಿ ಪಡೆಯುವ ಒಂದೇ ಕಾರಣಕ್ಕೆ ಧರ್ಮವನ್ನು ಅಧರ್ಮಗೊಳಿಸುವ ಕೆಲಸ ಯಾರೂ ಮಾಡಬಾರದು ಎಂದು ಎಸ್.ಎಂ. ಜಾಮದಾರ ಎಚ್ಚರಿಸಿದರು.
ಇದನ್ನೂ ಓದಿ: ಧರ್ಮ ಮತ್ತು ವಿಜ್ಞಾನ ಜೊತೆಯಾಗಿಯೇ ಸಾಗಬೇಕು: ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಕರೆ