ಬೆಳಗಾವಿ: ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ದೆಹಲಿ ಮತ್ತು ಪಂಜಾಬ್ನಲ್ಲಿ ನಡೆದ 59ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಕುಂದಾನಗರಿ ಬೆಳಗಾವಿಗೆ ಆರು ಪದಕಗಳು ಲಭಿಸಿವೆ. ಡಿಸೆಂಬರ್ 12 ರಿಂದ 23 ರಿಂದ 59ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಬೆಳಗಾವಿಯ ಸ್ಕೇಟರ್ ಪಟುಗಳಿಗೆ 1 ಚಿನ್ನ, 1 ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳು ಲಭಿಸಿವೆ. ದೆಹಲಿಯಲ್ಲಿ ನಡೆದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳಗಾವಿಯ ಅವನೀಶ್ ಕಾಮಣ್ಣವರ್ ಒಂದು ಚಿನ್ನ ಹಾಗೂ ಎರಡು ಕಂಚಿನ ಪದಕ ಬಾಚಿಕೊಂಡರು. ಪಿ. ಆರಾಧ್ಯ ಬೆಳ್ಳಿ ಪದಕ ಪಡೆದಿದ್ದಾರೆ.
ಪಂಜಾಬಿನಲ್ಲಿ ನಡೆದ ಇನ್‌ಲೈನ್ ಹಾಕಿ ಚಾಂಪಿಯನ್ ಶಿಪ್ನಲ್ಲಿ ಭಕ್ತಿ ಹಿಂಡಲ್ಗೇಕರ್ ಹಾಗೂ ಅಕ್ಷತಾ ಸಾವಂತ್ ತಲಾ ಒಂದು ಕಂಚಿನ ಪದಕ ಪಡೆದಿದ್ದಾರೆ. ಈ ಎಲ್ಲ ಸ್ಕೇಟರ್‌ಗಳು ಕಳೆದ 12 ವರ್ಷಗಳಿಂದ ಕೆಎಲ್‌ಇ ಸೊಸೈಟಿಯ ಸ್ಕೇಟಿಂಗ್ ರಿಂಕ್, ರೋಟರಿ ಕಾರ್ಪೊರೇಷನ್ ಸ್ಪೋರ್ಟ್ಸ್ ಅಕಾಡೆಮಿ, ಗುಡ್ ಶೆಫರ್ಡ್ ಸೆಂಟ್ರಲ್ ಸ್ಕೂಲ್ ಇಂಟರ್‌ನ್ಯಾಶನಲ್ ಸ್ಕೇಟಿಂಗ್ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸೂರ್ಯಕಾಂತ ಹಿಂಡಲಗೇಕರ ಈ ಪಟುಗಳಿಗೆ ತರಬೇತಿ ನೀಡಿದ್ದರು.