ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು ಹೆಚ್ಚಳವಾಗಿ ಚಿಕ್ಕೋಡಿ ಉಪವಿಭಾಗದ ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.
ಚಿಕ್ಕೋಡಿ ಉಪವಿಭಾಗದ ಯಡೂರ-ಕಲ್ಲೋಳ, ಜತ್ರಾಟ-ಭೀವಶಿ, ಅಕ್ಕೋಳ-ಸಿದ್ದನಾಳ, ಭೋಜವಾಡಿ-ಕುನ್ನೂರ, ಕಾರದಗಾ-ಭೋಜ, ಹುನ್ನರಗಿ- ಭೋಜವಾಡಿ, ನಡುವಿನ ಸಂಪರ್ಕ ಸೇತುವೆಗಳು ಮುಳುಗಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆಗಳ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ.
ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಪ್ರಯಾಣಿಕರು ಪರ್ಯಾಯ ರಸ್ತೆ ಮಾರ್ಗದಿಂದ ಸಂಚಾರ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 35,625 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 12,848 ಕ್ಯೂಸೆಕ್ ನೀರು ಸೇರಿ ಒಟ್ಟು 48,473 ಕ್ಯೂಸೆಕ್ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 247 ಎಂಎಂ, ನವಜಾ - 300 ಎಂಎಂ, ಮಹಾಬಲೇಶ್ವರ - 304 ಎಂಎಂ, ವಾರಣಾ - 140 ಎಂಎಂ, ಕಾಳಮ್ಮವಾಡಿ - 227 ಎಂಎಂ, ರಾಧಾನಗರಿ - 281 ಎಂಎಂ, ಪಾಟಗಾಂವ ಭಾಗದಲ್ಲಿ- 105 ಎಂಎಂ ಮಳೆಯಾಗಿದೆ ಎಂದು ವರದಿಯಾಗಿದೆ.