ಬೆಳಗಾವಿ: ಕುಂದಾನಗರಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹ ಹಿನ್ನಲೆ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಆದರೆ, ರಜೆಯ ಸಮಯ ಸದುಪಯೋಗ ಮಾಡಿಕೊಂಡಿರುವ ಬೆಳಗಾವಿಯ ಈ ಸಹೋದರಿಯರು ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.
ಹೌದು, ಈ ಸಹೋದರಿಯರು ಸಾರ್ವಜನಿಕರಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಸರಬರಾಜು ಮಾಡುತ್ತಿದ್ದಾರೆ. ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುಶ್ಮಿತಾ ಹಳ್ಯಾಳ ಹಾಗೂ ಸೌಂಧರ್ಯ ಹಳ್ಯಾಳ ಸಹೋದರಿಯರು ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ಬೆಳಗಾವಿಯ ವಿನಾಯಕ ನಗರದಲ್ಲಿ ವಾಸವಾಗಿರುವ ಈ ಸಹೋದರಿಯರು ಕಳೆದೊಂದು ವಾರದಿಂದ ಸಾರ್ವಜನಿಕರಿಂದ ಅಗತ್ಯ ವಸ್ತು ಸಂಗ್ರಹಿಸಿ ಸಂಜೆ ವೇಳೆಗೆ ಪರಿಹಾರ ಕೇಂದ್ರಗಳಿಗೆ ವಿತರಿಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರಿಂದ ನೆರವು ಪಡೆದು ಸಂತ್ರಸ್ತರಿಗೆ ಅಗತ್ಯ ವಸ್ತುಗಳಾದ ಶಾಲು, ಅಕ್ಕಿ, ಬಿಸ್ಕಿಟ್, ಸೋಪ್, ಬ್ರೇಷ್, ಪೇಸ್ಟ್ ಸಂಗ್ರಹಿಸಿ ವಿತರಿಸುತ್ತಿದ್ದಾರೆ. ಸಹೋದರಿಯರ ಮಾನವೀಯತೆಗೆ ವಿನಾಯಕ ಕಾಲನಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.