ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಅಮೂಲ್ ಕಾಳೆ ಬಳಸಿಕೊಂಡಿದ್ದ ಸಿಮ್ ಕಾರ್ಡ್ ಖರೀದಿ ವಂಚನೆ ಪ್ರಕರಣ ವರ್ಷದ ಬಳಿಕ ಬೇರೊಂದು ಪೊಲೀಸ್ ಠಾಣೆಗೆ ಪ್ರಕರಣ ಶಿಫ್ಟ್ ಆಗಿದೆ. ಈ ಪ್ರಕರಣದಲ್ಲಿ ಈವರೆಗೂ ಯಾರೊಬ್ಬ ಆರೋಪಿಗಳ ಬಂಧನವಾಗದಿರುವುದು ಪೊಲೀಸ್ ಇಲಾಖೆ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.
ಪ್ರಕರಣದ ವಿವರ:
2017ರ ಸೆ. 5ರಂದು ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಕೃತ್ಯಕ್ಕೂ 15 ತಿಂಗಳ ಮೊದಲೇ ಅಮೂಲ್ ಕಾಳೆ 2016ರ ಜನವರಿ 1ರಂದು ಸಂತಿಬಸ್ತವಾಡದ ಯುವಕನೋರ್ವನ ಆಧಾರ್ ಕಾರ್ಡ್ ನೀಡಿ ಐಡಿಯಾ ಕಂಪನಿಯ 8548008268 ಸಂಖ್ಯೆಯ ಸಿಮ್ ಕಾರ್ಡ್ ಖರೀದಿಸಿದ್ದ. ಕೊಲೆ ಪ್ರಕರಣ ನಡೆದು ಎರಡು ವರ್ಷದ ಬಳಿಕ ಆರೋಪಿ ಬಳಸಿದ್ದ ಸಿಮ್ ತನ್ನ ಹೆಸರಲ್ಲಿದೆ ಎಂದು ಎಸ್‌ಐಟಿ ಪೊಲೀಸರು ಮನೆಗೆ ಬಂದು ತನಿಖೆ ನಡೆಸಿದಾಗಲೇ ತನಗೆ ಗೊತ್ತಾಗಿರುವ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂತಿಬಸ್ತವಾಡದ ಯುವಕ 2018ರ ಮಾರ್ಚ್ ತಿಂಗಳಲ್ಲಿ ದೂರು ದಾಖಲಿಸಿದ್ದನು.

ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ನಗರದಲ್ಲಿನ ಝರಾಕ್ಸ್ ಸೆಂಟರ್ ಮೂಲಕ ಆಧಾರ್ ಕಾರ್ಡ್ ಕಾಳೆ ಕೈ ಸೇರಿದೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಆ ಅಂಗಡಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿರುವುದರಿಂದ ಜೂ.13ರಂದು ಅಲ್ಲಿಗೆ ಪ್ರಕರಣ ವರ್ಗಾಯಿಸಲಾಗಿದ್ದು, ಇದೀಗ ಹೊಸ ಕೇಸು ದಾಖಲಾಗಿದೆ. ಈ ಕುರಿತು ಪ್ರಕರಣದ ತನಿಖಾಧಿಕಾರಿಯನ್ನು ಸಂಪರ್ಕಿಸಿದಾಗ ದೂರುದಾರರ ವಿಳಾಸ ಆಧರಿಸಿ ಗ್ರಾಮೀಣ ಠಾಣೆಯಲ್ಲಿ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು.
ಇದೀಗ ದಾಖಲೆಯನ್ನು ನಕಲು ಮಾಡಿರುವ ಝರಾಕ್ಸ್ ಅಂಗಡಿಯು ಮಾರ್ಕೆಟ್ ಪ್ರದೇಶದಲ್ಲಿರುವುದರಿಂದ ಕೇಸ್ ವರ್ಗಾವಣೆಯಾಗಿದ್ದು, ತನಿಖೆ ನಡೆಯುತ್ತಿದೆ. ಆದ್ರೆ, ಕಳೆದೊಂದು ವರ್ಷಗಳಿಂದ ಪೊಲೀಸ್ ಅಧಿಕಾರಿಗಳು ಏಕೆ ಸುಮ್ಮನಿದ್ದರು. ಆಗಲೇ ಏಕೆ ಈ ಪ್ರಕರಣವನ್ನು ವರ್ಗಾವಣೆ ಮಾಡಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಕೃತ್ಯ ಎಸಗಲು ಉಪಯೋಗಿಸಲೆಂದೇ ಮತ್ತೊಬ್ಬರ ಹೆಸರಿನಲ್ಲಿ ಸಿಮ್ ಖರೀದಿಸುವ ದುಷ್ಟರ ಕೈಗೆ ಮುಗ್ದರ ದಾಖಲೆಗಳು ಲಭ್ಯವಾಗುತ್ತಿರುವುದು ಜನತೆಯನ್ನು ಮತ್ತಷ್ಟು ಆತಂಕಕ್ಕೆ ತಂದೊಡ್ಡಿದೆ ಎನ್ನಬಹುದು.