ಅಥಣಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇದೇ ತಿಂಗಳ 7ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ, ಹಾಕಿ ಪ್ರತಿಭಟಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಜನ ಪ್ರತಿನಿಧಿಗಳು ವೋಟ್ ಮತ್ತು ಅಧಿಕಾರಕ್ಕಾಗಿ ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ನೆರೆಹಾವಳಿ ಹಾಗೂ ಬರದಿಂದ ರೈತರು ಹಾಗೂ ಜನರು ಬಳಲುತ್ತಿರುವದಕ್ಕೆ ಸರ್ಕಾರವೇ ಕಾರಣ. ನೆರೆಯಿಂದ ಎರಡುವರೆ ಲಕ್ಷ ಮನೆಗಳು ನೆಲಸಮವಾಗಿವೆ. 15 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ನಾಶವಾಗಿದೆ ಎಂದರು.
ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆ ಮಾಲಿಕರು ಎಫ್‌ಆರ್‌ಪಿ ದರ ನೀಡದೆ ಕಬ್ಬು ಬೆಳೆಗಾರರನ್ನು ಸತಾಯಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಬ್ಯಾಂಕ್‌ನವರು ಸಾಲ ತೀರಿಸುವಂತೆ ನೋಟಿಸ್ ನೀಡುವ ನೈತಿಕತೆ ಇರದಿದ್ದರೂ, ಸಾಲ ತೀರಿಸುವಂತೆ ನೋಟಿಸ್ ನೀಡುತ್ತಿದ್ದಾರೆ. ನೆರೆ, ಬರದಿಂದ ಬಳಲುತ್ತಿರುವ ರೈತರ ಬೆಳೆ ಸಾಲ, ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಹಾಗೂ ಪರಿಹಾರ ಸರ್ಕಾರ ನೀಡಬೇಕು ಎಂದು ರಾಜ್ಯದ ಲಕ್ಷಾಂತರ ರೈತರೆಲ್ಲ ಸೇರಿ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದರು.