ಚಿಕ್ಕೋಡಿ: ''ಮುಸ್ಲಿಂ ಸಮುದಾಯದ ಓಲೈಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾದಿ ಭಾಗ್ಯ ನೀಡಿ ಒಂದೇ ಸಮುದಾಯಕ್ಕೆ ಯೋಜನೆ ರೂಪಿಸಿ ಜಾತಿಗಳನ್ನು ಒಡೆಯುವ ಕಾರ್ಯ ಮಾಡಿದ್ದಾರೆ. ಇದರ ಜೊತೆಗೆ ಲಿಂಗಾಯತ, ವೀರಶೈವರನ್ನು ಬೇರೆ ಮಾಡುವಂತಹ ಪ್ರಯತ್ನ ಮಾಡಿದರು'' ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಟೀಕಿಸಿದರು.
ಭಾನುವಾರ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿ ಗ್ರಾಮದಲ್ಲಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯ ಶಾಲಾ ಮಕ್ಕಳಲ್ಲೂ ಜಾತಿ ವಿಷ ಬಿತ್ತುವ ಕಾರ್ಯ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಮೂಲಕ ಹಿಂದೂ-ಮುಸ್ಲಿಂ ಸಮುದಾಯಗಳನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ" ಎಂದು ಕಿಡಿಕಾರಿದರು.
ಇದನ್ನೂ ಓದಿ: ಕರ್ನಾಟಕದ ಯುವಜನರ ಭವಿಷ್ಯಕ್ಕಾಗಿ ಯುವ ಗ್ಯಾರೆಂಟಿ ಕಾರ್ಡ್ ರಾಹುಲ್ ಘೋಷಣೆ : ರಣದೀಪ್‌ಸಿಂಗ್ ಸುರ್ಜೇವಾಲಾ
''ಬಿಜೆಪಿ ಸರ್ಕಾರವು ಗ್ಯಾರಂಟಿ ಕೊಡುತ್ತದೆ ಎಂದು ಬೋರ್ಡ್ ಹಾಕಿಲ್ಲ. ಎಲ್ಲಾ ಸಮುದಾಯಗಳಿಗೆ ಸಮರ್ಪಕವಾಗಿ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಂಚಿದ್ದಾರೆ. ಸಿದ್ದರಾಮಯ್ಯನವರ ತರ ಒಂದೇ ಜಾತಿಗೆ ಸೀಮಿತ ರೀತಿಯಲ್ಲಿ ಯೋಜನೆ ಮಾಡುವುದಿಲ್ಲ. ಕಡಿಮೆ ಅವಧಿಯಲ್ಲಿಯೇ ಬಿಜೆಪಿ ಹೆಚ್ಚು ಕೆಲಸ ಮಾಡಿದೆ. 2013ರಲ್ಲಿ ನಮ್ಮ ಸರ್ಕಾರ ಹೋದ ಮೇಲೆ ಸಿದ್ದರಾಮಯ್ಯನವರ ಸರ್ಕಾರ ಬಂದಿದೆ."
"ನಂತರ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದು ಒಂದೇ ಸಮುದಾಯವನ್ನು ಓಲೈಸುವ ಕಾರ್ಯ ಮಾಡಲಾಯಿತು. ಇದನ್ನು ವಿರೋಧಿಸಿ ಯಡಿಯೂರಪ್ಪನವರು ಬೆಂಗಳೂರಿನಲ್ಲಿ 42 ದಿನಗಳವರೆಗೆ ಬೀದಿಯಲ್ಲಿ ಹೋರಾಟ ಮಾಡಿದರು. ಎಲ್ಲಾ ಜಾತಿಗಳಲ್ಲಿ ಬಡವರಿದ್ದಾರೆ, ಅವರೆಲ್ಲರಿಗೂ ಅನ್ವಯಿಸುವಂತೆ ಯೋಜನೆ ರೂಪಿಸಲು ಒತ್ತಾಯಿಸಿ ಧರಣಿ ನಡೆಸಿದರು. ಆದರೆ, ಸಿದ್ದರಾಮಯ್ಯ ಜಾತಿಗಳನ್ನು ಒಡೆದು ಆಳ್ವಿಕೆ ಮಾಡಿದರು'' ಎಂದು ದೂರಿದರು.
''ಯಡಿಯೂರಪ್ಪನವರ ಆಡಳಿತದಲ್ಲಿ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ ಯೋಜನೆ ಜಾರಿ ಮಾಡಿದ್ದಾರೆ. ಮುಸ್ಲಿಂ ಸಮುದಾಯದವರಿಗೆ ಸೇರಿದಂತೆ ಎಲ್ಲಾ ಸಮುದಾಯದ ಜನರಿಗೂ ಈ ಯೋಜನೆಗಳು ದೊರೆಯುವಂತೆ ಮಾಡಿದರು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಡುವೆ ಇರುವ ವ್ಯತ್ಯಾಸ'' ಎಂದರು.
''ಚುನಾವಣೆ ಬಂತೆಂದರೆ ಹಲವು ರಾಜಕೀಯ ಪಕ್ಷಗಳು ಬರುತ್ತವೆ. ಅವುಗಳು ಗ್ಯಾರಂಟಿಗಳನ್ನು ಕೊಡುತ್ತವೆ. ಆದರೆ, ಚುನಾವಣೆ ಮುಗಿದ ಮೇಲೆ, ಮತ್ತೆ ಐದು ವರ್ಷ ನಂತರವೇ ಆ ಪಕ್ಷಗಳು ತಮ್ಮ ಮುಖವನ್ನು ಜನರಿಗೆ ತೋರಿಸುತ್ತವೆ. ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎನ್ನುವುದನ್ನು ಯಾರೂ ಕೂಡ ನಂಬಬೇಡಿ. ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಅಲ್ಲಿನ ರೈತರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ'' ಎಂದು ಕೇಂದ್ರ ಸಚಿವೆ ತಿಳಿಸಿದರು.
ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ದಿವ್ಯಾಂಗರು, ಅವಕಾಶ ವಂಚಿತರ ಶ್ರೇಯೋಭಿವೃದ್ಧಿಗೆ ಆದ್ಯತೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್