ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಸಿಗದೆ ಕೋವಿಡ್ ರೋಗಿಗಳು ತೀವ್ರ ಪರದಾಟ ನಡೆಸುತ್ತಿದ್ದು, ಒಂದಾದರೂ ಬೆಡ್ ಕೊಡಿಸಿ ಎಂದು ರೋಗಿಯ ಕುಟುಂಬಸ್ಥರು ಗೋಳಾಡುತ್ತಿದ್ದಾರೆ.
ನಗರದ ಚೆನ್ನಮ್ಮ ವೃತ್ತದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಸಿಗದೆ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಬಿಮ್ಸ್ನಲ್ಲಿ ಕೋವಿಡ್ ಸೋಂಕಿತರು ಸೇರಿದಂತೆ ಸಣ್ಣಪುಟ್ಟ ಅನಾರೋಗ್ಯ ಇರುವವರಿಗೂ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸೌಲಭ್ಯಗಳ ಕೊರತೆ, ವೈದ್ಯರ ನಿರ್ಲಕ್ಷ್ಯಕ್ಕೆ ಜನ ಪ್ರಾಣ ಕಳೆದುಕೊಳ್ಳುವಂತಾಗಿದೆ. ಆಕ್ಸಿಜನ್, ಬೆಡ್ ಕೊಡುವಂತೆ ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಮಹಾಂತೇಶ ನಗರದ ವ್ಯಕ್ತಿಯೊಬ್ಬರು ಕಫದ ಸಮಸ್ಯೆಯಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ವೆಂಟಿಲೇಟರ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡುತ್ತೇವೆ ಎಂದು ವೈದ್ಯರು ಹೇಳುತ್ತಿದ್ದಾರಂತೆ. ನಾವು ಎಲ್ಲಾ ವೈದ್ಯರನ್ನು ಸಂಪರ್ಕಿಸಿ ವೆಂಟಿಲೇಟರ್ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಚಿಕಿತ್ಸೆಗೆ ಎಲ್ಲವೂ ಇದೆ ಎಂದು ಹೇಳುತ್ತಾರೆ. ಆದರೆ, ಇಲ್ಲಿ ನೋಡಿದರೆ ಪರಿಸ್ಥಿತಿ ಬೇರೆಯದೇ ಇದೆ. ರೋಗಿಯ ಕೈ ಕಾಲು ತಣ್ಣಗಾಗುತ್ತಿವೆ, ನಮಗೆ ಆತಂಕವಾಗುತ್ತಿದೆ ಎಂದು ರೋಗಿಯ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.
ಓದಿ : ಗದಗ: ಜಿಮ್ಸ್ನಲ್ಲೂ ಬೆಡ್ ಸಮಸ್ಯೆ, ರೋಗಿಗಳ ಪರದಾಟ
ಈ ಬಗ್ಗೆ ರೋಗಿಯ ಸಂಬಂಧಿ ಮುಝಮ್ಮಿಲ್ ಡೋಣಿ ಮಾತನಾಡಿ, ಚಿಕಿತ್ಸೆಗೆ ವೆಂಟಿಲೇಟರ್ ಇಲ್ಲ ಎನ್ನುತ್ತಿದ್ದಾರೆ. ಇಲ್ಲಿ ಆಕ್ಸಿಜನ್ ಸಮಸ್ಯೆ ತೀವ್ರವಾಗಿದೆ. ಬಿಮ್ಸ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಬೆಳಗ್ಗೆಯಿಂದ ನಾಲ್ಕು ಮೃತದೇಹಗಳನ್ನು ಸಾಗಿಸಿದ್ದನ್ನು ನಾವೇ ನೋಡಿದ್ದೇವೆ. ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.