ಶಿವಮೊಗ್ಗ: ಈವರೆಗೂ ಶಿವಮೊಗ್ಗದಲ್ಲಿ ಕೊರೊನಾ ಸೋಂಕು ಕಂಡು ಬಂದಿಲ್ಲ. ಈ ಹಿನ್ನೆಲೆ ಜಿಲ್ಲೆ ಸದ್ಯ ಗ್ರೀನ್ ಝೋನ್ನಲ್ಲಿದ್ದು, ಲಾಕ್ಡೌನ್ ನಿಯಮಾವಳಿಯನ್ನು ಕೊಂಚ ಸಡಿಲಿಸಲಾಗಿದೆ. ಆದರೆ ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ವ್ಯಾಪಾರಸ್ಥರು ಹಾಗೂ ಗ್ರಾಹಕರು ಲಾಕ್ಡೌನ್ ನಿಯಾಮಾವಳಿಯನ್ನೇ ಗಾಳಿಗೆ ತೂರಿರುವ ಘಟನೆ ನಡೆದಿದೆ.
ಈ ಹಿನ್ನೆಲೆ ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಶಿವಮೊಗ್ಗ ತಹಶೀಲ್ದಾರ್ ನಾಗಾರಾಜ್ ಬಿಸಿ ಮುಟ್ಟಿಸಿದ್ದಾರೆ. ನಗರದ ಗಾಂಧಿ ಬಜಾರ್ಗೆ ದಿಢೀರ್ ಭೇಟಿ ನೀಡಿದ ಅವರು, ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಲಾಕ್ಡೌನ್ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಿದ್ದಲ್ಲದೆ ದಂಡ ವಿಧಿಸಿದ್ದಾರೆ.
ಪ್ರತೀ ಅಂಗಡಿಯನ್ನು ಪರಿಶೀಲಿಸಿದ ಅವರು, ಮಾಸ್ಕ್ ಹಾಕದೆ ವ್ಯಾಪಾರ ನಡೆಸುತ್ತಿರುವವರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡದರು. ಅಂಗಡಿಯಲ್ಲಿ ವ್ಯಾಪಾರ ಮಾಡುವವರು ಮಾತ್ರವಲ್ಲ, ಗ್ರಾಹಕರು ಕೂಡ ಮಾಸ್ಕ್ ತೊಡಬೇಕು. ಮಾಸ್ಕ್ ಹಾಕದ ಗ್ರಾಹಕರೊಂದಿಗೆ ವ್ಯಾಪಾರ ನಡೆಸುವಂತಿಲ್ಲ. ಮಾಸ್ಕ್ ಹಾಕುವಂತೆ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು ಅಂತ ವ್ಯಾಪಾರಸ್ಥರಿಗೆ ತಿಳಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ನಾಗರಾಜ್, ಜನರು, ವ್ಯಾಪಾರಿಗಳಲ್ಲಿ ಈ ಜಾಗೃತಿ ಮೂಡಿಸಲಿಲ್ಲ ಅಂದರೆ ಕೊರೊನಾ ಮಹಾಮಾರಿಯ ಅತಂಕ ಇನ್ನಷ್ಟು ಹೆಚ್ಚಳವಾಗಲಿದೆ. ಮಾಸ್ಕ್ ಹಾಕದೆ ವ್ಯಾಪಾರಕ್ಕೆ ಬಂದವರಿಗೂ ದಂಡ ಹಾಕಲಾಗುತ್ತಿದೆ. ಈವರೆಗೆ 100 ಕೇಸ್ ದಾಖಲಿಸಲಾಗಿದೆ ಎಂದರು.