ಬೆಳಗಾವಿ : ಬೆಳಗಾವಿ-ಧಾರವಾಡ ಮತ್ತು ಶಿವಮೊಗ್ಗ-ರಾಣೇಬೆನ್ನೂರು ರೈಲು ಯೋಜನೆಗಳನ್ನು ಮುಂದಿನ ರೈಲ್ವೆ ಬಜೆಟ್ನಲ್ಲಿ ಅಳವಡಿಸಿಕೊಂಡು ಆದಷ್ಟು ಬೇಗ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿ ಲಿಫ್ಟ್, ಅರಸಾಳು ನಿಲ್ದಾಣದಲ್ಲಿ ಮೂಲಸೌಕರ್ಯಗಳು, ಸ್ಟೇಷನ್ ಬಿಲ್ಡಿಂಗ್ (ಮ್ಯೂಸಿಯಂ ಬಿಲ್ಡಿಂಗ್) ಹಾಗೂ ವಿಸ್ತರಣೆಗೊಂಡ ರೈಲ್ವೆ ಪ್ಲಾಟ್ ಫಾರ್ಮ್‌ನ ಶನಿವಾರ ವರ್ಚುವಲ್ ವೇದಿಕೆಯ ಮೂಲಕ ತಮ್ಮ ಬೆಳಗಾವಿ ಕಚೇರಿಯಿಂದಲೇ ಉದ್ಘಾಟಿಸಿ ಅವರು ಮಾತನಾಡಿದರು.
994 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ-ರಾಣೇಬೆನ್ನೂರು ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಉಚಿತವಾಗಿ ಭೂಮಿ ಒದಗಿಸುವುದರ ಜೊತೆಗೆ, ರಾಜ್ಯ ಸರ್ಕಾರದ ವತಿಯಿಂದ ಶೇ.50ರಷ್ಟು ಯೋಜನಾ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ದಾವಣಗೆರೆ-ಬೆಂಗಳೂರು ನಡುವೆ ಡಬಲ್‌ಲೈನ್ ನಿರ್ಮಾಣಕ್ಕೂ ಜಮೀನು ಒದಗಿಸುವುದಾಗಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದ ತಕ್ಷಣವೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮವನ್ನು ಇಲಾಖೆಯ ವತಿಯಿಂದ ಕೈಗೊಳ್ಳಲಾಗುವುದು ಎಂದು ಸಚಿವ ಅಂಗಡಿ ತಿಳಿಸಿದರು.
ಪ್ರತಿ ನಗರಗಳನ್ನು ರೈಲು ಮಾರ್ಗದ ಮೂಲಕ ಜೋಡಿಸಲು ರೈಲ್ವೆ ಇಲಾಖೆ ಉತ್ಸುಕವಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರ ಮನವಿಯ ಮೇರೆಗೆ ಶಿವಮೊಗ್ಗದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗೊಬ್ಬರ ಮತ್ತು ಔಷಧಿಯನ್ನು ಸಮರ್ಪಕವಾಗಿ ಸಾಗಾಣಿಕೆ ಮಾಡುವ ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಕೊರೊನಾ ಯೋಧರಂತೆಯೇ ಕಾರ್ಯನಿರ್ವಹಿಸಿದ್ದಾರೆ ಎಂದು ಸಚಿವ ಸುರೇಶ್ ಅಂಗಡಿ ಮೆಚ್ಚುಗೆ ವ್ಯಕ್ತಪಡಿಸಿದರು.