ಬೆಳಗಾವಿ: ಜಿಲ್ಲೆಯ ಐದು ತಾಲೂಕುಗಳ 51 ಗ್ರಾಮಗಳಲ್ಲಿ ನೀರು ನುಗ್ಗಿದೆ. 26 ಕಾಳಜಿ ಕೇಂದ್ರಗಳನ್ನು ತೆರೆದು 2,000 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.
ಅತಿವೃಷ್ಟಿ ಪ್ರದೇಶದಲ್ಲಿ ಪ್ರವಾಹ ಸಿದ್ಧತೆಗಳ ಕುರಿತು ಸಿಎಂ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 47 ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, 51 ಗ್ರಾಮಗಳು ಜಲಾವೃತಗೊಂಡಿವೆ. 224 ಮನೆಗಳು ಭಾಗಶಃ ಹಾಗೂ ಒಂದು ಮನೆ ಸಂಪೂರ್ಣ ಕುಸಿದಿವೆ. ಯಾವುದೇ ಜೀವಹಾನಿಯಾಗಿರುವುದಿಲ್ಲ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿರುವುದರಿಂದ ಜಿಲ್ಲಾ ಮುಖ್ಯ ರಸ್ತೆಗಳು ಸೇರಿ 47 ರಸ್ತೆ ಸಂಚಾರ ಸ್ಥಗಿತಗೊಂಡಿರುತ್ತದೆ. ಇದಲ್ಲದೇ 36 ಸೇತುವೆ ಮುಳುಗಡೆಯಾಗಿವೆ. ಅದೇ ರೀತಿ ಭೂಕುಸಿತದಿಂದ ನಿಪ್ಪಾಣಿಯ ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಕಳೆದ 24 ಗಂಟೆಗಳಲ್ಲಿ 6 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 66 ಮಿ.ಮೀ. ಮಳೆಯಾಗಿರುವುದರಿಂದ ತೊಂದರೆಯಾಗಿದೆ. ಜಿಲ್ಲೆಯ ಐದು ತಾಲ್ಲೂಕುಗಳ 51 ಗ್ರಾಮಗಳಲ್ಲಿ ನೀರು ನುಗ್ಗಿದೆ. 26 ಕಾಳಜಿ ಕೇಂದ್ರ 2,000 ಜನರಿಗೆ ಆಶ್ರಯ ನೀಡಲಾಗಿದೆ.
ಖಾನಾಪುರ ತಾಲ್ಲೂಕಿನಲ್ಲಿ ವಿದ್ಯುತ್ ಅಪಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ 223 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಂದು ಮನೆ ಸಂಪೂರ್ಣ ಕುಸಿತವಾಗಿದೆ. ಮನೆ ಹಾನಿಗೂ ಸೂಕ್ತ ಪರಿಹಾರಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ರಸ್ತೆ ದುರಸ್ತಿಗೆ 50 ಕೋಟಿ ಬಿಡುಗಡೆಗೆ ಮನವಿ: ರಸ್ತೆ, ಕಟ್ಟಡಗಳು ಸೇರಿದಂತೆ ಮೂಲಸೌಕರ್ಯಗಳ ದುರಸ್ತಿಗೆ ಬೆಳಗಾವಿ, ಉತ್ತರ ಕನ್ನಡ ಸೇರಿ ಲೋಕೋಪಯೋಗಿ ಇಲಾಖೆಗೆ ತಕ್ಷಣವೇ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಒತ್ತಾಯಿಸಿದರು.
ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ಬೆಳಗಾವಿ ಹಾಗೂ ಬಾಗಲಕೋಟೆಗೆ ತಲಾ ಇನ್ನೊಂದು ಎನ್.ಡಿ.ಆರ್.ಎಫ್ ತಂಡ ನಿಯೋಜಿಸಬೇಕು. ಸದ್ಯಕ್ಕೆ 95 ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿದ್ದು, ಇದರಿಂದ ಬಾಗಲಕೋಟೆಗೂ ಕೂಡ ಪ್ರವಾಹ ಭೀತಿ ಎದುರಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ ಮತ್ತಿತರ ಮೂಲಸೌಕರ್ಯಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಸಾವಿರ ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ ಎಂದು ಹೇಳಿದರು.
ಕಲ್ಲೋಳ ಬ್ಯಾರೇಜ್ ಕಾಮಗಾರಿಗೆ ಮಂಜೂರಾತಿ ನೀಡಲು ಮನವಿ: ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ನಿರ್ಮಾಣಕ್ಕೆ 35 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಬೇಕು. ನೀರಾವರಿ ನಿಗಮದ ಮಂಡಳಿ ಸಭೆಯಲ್ಲಿ ಈಗಾಗಲೇ ಕಲ್ಲೋಳ ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಹಣಕಾಸು ಇಲಾಖೆಯ ಅನುಮೋದನೆ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ವಿವರಿಸಿದರು.
ಹಣಕಾಸು ಇಲಾಖೆಯ ವತಿಯಿಂದ ಕೂಡ ತಕ್ಷಣವೇ ಮಂಜೂರಾತಿ ನೀಡಬೇಕು. ಅನುಮೋದನೆ ದೊರೆತರೆ ಅಕ್ಟೋಬರ್ ನಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಕಾರಜೋಳ ತಿಳಿಸಿದರು.
ಬೆಳಗಾವಿ ಪ್ರವಾಹ ನಿರ್ವಹಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಕಡಿಮೆಯಾದರೆ ಸದ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ಮಳೆ ಮುಂದುವರಿದರೆ ಸ್ವಲ್ಪಮಟ್ಟಿಗೆ ತೊಂದರೆಯಾಗಲಿದೆ. ಆಲಮಟ್ಟಿ ಜಲಾಶಯಕ್ಕೆ ಸದ್ಯಕ್ಕೆ 1.50 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸದಂತೆ ತಡೆಗಟ್ಟುವ ಉದ್ಧೇಶದಿಂದ ಮುಂಜಾಗ್ರತಾ ಕ್ರಮವಾಗಿ 3 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಇದನ್ನೂ ಓದಿ : ಇತ್ತ ಜಲದಿಗ್ಬಂಧನ ಅತ್ತ ಹೆರಿಗೆ ನೋವು : ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿದ ಯುವಕರು
ಜಿಲ್ಲೆಯಲ್ಲಿ ವಾಡಿಕೆಯಂತೆ 6 ಎಂಎಂ ಮಳೆಯಾಗಬೇಕಿತ್ತು. ಆದರೆ, 66 ಎಂಎಂ ಮಳೆಯಾಗಿದೆ. 24 ಗಂಟೆಯಲ್ಲಿ ವಾಡಿಕೆಗಿಂತ ಅತಿಹೆಚ್ಚು ಮಳೆಯಾಗಿದೆ. ಭಾರಿ ಮಳೆಯಿಂದ ವಿವಿಧ ರಸ್ತೆ, ಸೇತುವೆ, ಕಟ್ಟಡಗಳು ಹಾನಿಯಾಗಿವೆ.
ಹಿಡಕಲ್ ಡ್ಯಾಂನಲ್ಲಿ ಇನ್ನು 10 ಟಿಎಂಸಿ ನೀರು ಕೊರತೆ ಇದ್ದರೂ ಕೂಡ ಮೇಲಿನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂದ 80 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಹೀಗಾಗಿ 25 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದೇವೆ. ಬಳ್ಳಾರಿ ನಾಲಾದಿಂದ 13 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಹಿಡಕಲ್ ಡ್ಯಾಮ್ ಸೇರಿ ಘಟಪ್ರಭಾ ನದಿಗೆ 95 ಸಾವಿರ ಕ್ಯೂಸೆಕ್‍ನಷ್ಟು ನೀರು ಬರುತ್ತಿದೆ ಎಂದು ಹೇಳಿದರು.