ಚಿಕ್ಕೋಡಿ: ಪ್ರವಾಹಕ್ಕೆ ಸಾವಿರಾರು ಮನೆಗಳು ನೆಲಕಚ್ಚಿದರೂ ಸಬೂಬು ಹೇಳಿಕೊಂಡು ಜಾರಿಕೊಳ್ಳುತ್ತಿದ್ದ ವಸತಿ ಸಚಿವ ವಿ. ಸೋಮಣ್ಣ, ಕೊನೆಗೂ ಸಂತ್ರಸ್ತರ ಕಡೆಗೆ ಕೊನೆಗೂ ಗಮನ ಹರಿಸಿದ್ದಾರೆ. ಮಳೆ ಕಡಿಮೆ ಆದ ಕಾರಣ ಮಾಂಜರಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಬಳಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿದೆ. ಸರ್ಕಾರ ಸುಮ್ಮನೆ ಕುಳಿತಿಲ್ಲ, ಹೊಸ ಮನೆಗಳ ನಿರ್ಮಾಣಕ್ಕೆ ಮೂರು ತಿಂಗಳು ಕಾಲಾವಧಿ ಕೊಟ್ಟಿದ್ದೇವೆ. ಅಷ್ಟರೊಳಗೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ವಿವಿಧ ವಸತಿ ಯೋಜನೆಗಳ ಹಣ ಬಿಡುಗಡೆಗೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ವಸತಿ ಯೋಜನೆಗಳಲ್ಲಿ ಇಡೀ ರಾಜ್ಯದಲ್ಲಿಯೇ ಏಳು ವರ್ಷದಲ್ಲಿ ಸಾಕಷ್ಟು ಗೋಲ್ಮಾಲ್ ನಡೆದಿದೆ. ಬಡವರ ಮನೆಗಳನ್ನು ಬಹುತೇಕ ಜನ ಲಪಟಾಯಿಸಿದ್ದಾರೆ. ನಿನ್ನೆಯಷ್ಟೇ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಿದ್ದೇನೆ. ಈ ಕುರಿತು ಅಧಿಕಾರಿಗಳು, ಶಾಸಕರು, ಸಂಸದರಿಗೆ ಪತ್ರ ಬರೆದಿದ್ದೇನೆ ಎಂದರು. ಒಂದು ಮನೆಗೆ 10 ರಿಂದ 15 ಬಾರಿ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಒಂದು ವಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಜಿಲ್ಲಾ ಮಟ್ಟ ಹಾಗೂ ವಸತಿ ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲು ಆಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಲ್ಲಿ ಎಷ್ಟೇ ದೊಡ್ಡ ಅಧಿಕಾರಿಗಳು ಶಾಮೀಲಾಗಿದ್ದರೂ, 15 ದಿನಗಳಲ್ಲಿ ಕ್ರಮ ಜರಗಿಸಲಾಗುವುದು. ವಸತಿ ಯೋಜನೆಯ ಗೋಲ್ ಮಾಲ್ ಕಾರಣ ಹಣ ಬಿಡುಗಡೆಯನ್ನು ಸ್ಥಗಿತಗೊಳಿಸಲಾಗಿದೆ ಎಂದರು.
ಇನ್ನು ಕೃಷ್ಣಾ ನದಿ ತೀರದ ಗ್ರಾಮಗಳಾದ ಚಿಕ್ಕೋಡಿ, ಕಾಗವಾಡ ತಾಲೂಕಿನ ಮಾಂಜರಿ, ಯಡೂರು ಹಾಗೂ ಜೂಗುಳ ಗ್ರಾಮಕ್ಕೆ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದರು. ಸಚಿವರಿಗೆ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವಿಧಾನ ಪರಿಷತ್ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಅಧಿಕಾರಿಗಳು ಸಾಥ್ ನೀಡಿದ್ರು.