ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆ ಆಗಬೇಕೆಂಬುದು ಅನೇಕ ವರ್ಷಗಳಿಂದ ಜಿಲ್ಲಾ ಹೋರಾಟ ಸಮಿತಿಯ ಇಚ್ಛೆ. ಇಲ್ಲಿನ ಜನರ ಆಸೆಯೂ ಕೂಡ ಅದೇ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಿಪ್ಪಾಣಿ ಪಟ್ಟಣದ ಸ್ವಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಜಿಲ್ಲೆಯನ್ನು ಸದ್ಯ ಶೈಕ್ಷಣಿಕ ಜಿಲ್ಲೆ ಎಂದು ಕರೆಯುತ್ತೇವೆ. ಈಗಾಗಲೇ ಡಿಡಿಪಿಐ ಕಚೇರಿ ಡಿವೈಎಸ್‌ಪಿ ಹೀಗೆ ಎಲ್ಲಾ ವರ್ಗದ ಕಚೇರಿಗಳು ಚಿಕ್ಕೋಡಿಯಲ್ಲಿವೆ. ಈ ಭಾಗದಲ್ಲಿ ಎಂಟು ತಾಲೂಕುಗಳಿವೆ. ಅಥಣಿಯ ಕೊನೆಯ ಹಳ್ಳಿಯಿಂದ ಬೆಳಗಾವಿ ಜಿಲ್ಲೆಗೆ ಹೋಗಬೇಕಾದರೆ ಬಹಳ ದೂರ. ಸುಮಾರು 120 ಕಿ.ಮೀ ಗಿಂತ ಹೆಚ್ಚು ದೂರ ಪ್ರಯಾಣ ಮಾಡುವ ಪರಸ್ಥಿತಿ ಇದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದರು.
ಈ ತೊಂದರೆ ಪರಿಹಾರವಾಗಬೇಕಾದರೆ ಚಿಕ್ಕೋಡಿ ಜಿಲ್ಲೆಯಾಗಲೇಬೇಕು. ಹೋರಾಟ ಸಮಿತಿಯವರು ಕೂಡಾ ಈಗಾಗಲೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಚಿಕ್ಕೋಡಿ ಜಿಲ್ಲೆ ಮಾಡುವ ಕುರಿತಂತೆ ಆದಷ್ಟು ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆಂದು ಸಚಿವೆ ಜೊಲ್ಲೆ ತಿಳಿಸಿದರು.