ಬೆಳಗಾವಿ: ನೀಟ್ ರಿಪೀಟರ್ಸ್ ಗೆ ತರಬೇತಿ ನೀಡಲು ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ 5 ಕೋಟಿ ಶಿಷ್ಯವೇತನ ಯೋಜನೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖಾದೀರ್ ಮಾಹಿತಿ ನೀಡಿದರು.
ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣ ಹೊಂದಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಉದ್ದೇಶಿಸಲಾಗಿದೆ. ಒಂದೇ ಸಲಕ್ಕೆ ನೀಟ್ ಅಲ್ಲಿ ಅರ್ಹತೆ ಹೊಂದಲು ಸಾಧ್ಯವಾಗದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ. ದೇಶದಲ್ಲಿ ಒಟ್ಟು 3 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಿ ಉಚಿತ ವಸತಿ ಸಹಿತ ನೀಟ್ ಪರೀಕ್ಷೆಯ ತರಬೇತಿ ನೀಡಲಾಗುವುದು. ಕೊರೊನಾದಿಂದ ಹಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹಣಕಾಸಿನ ತೊಂದರೆಯಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ಶಿಷ್ಯವೇತನ ಜಾರಿಗೆ ತರಲಾಗಿದೆ ಎಂದರು.
ಬೀದರ್‌ನಲ್ಲಿ ಆರಂಭಗೊಂಡಿರುವ ನಮ್ಮ ಸಂಸ್ಥೆ ಸದ್ಯ ದೇಶದ 42 ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಕಲಿಕಾಸಕ್ತಿ ಹೊಂದಿದ್ದರೂ ಆರ್ಥಿಕ ಸಮಸ್ಯೆಗಳಿಂದ ಹಿಂದುಳಿಯುತ್ತಿರುವ ಎಲ್ಲ ಧರ್ಮದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆ ಅವಕಾಶ ನೀಡುತ್ತಿದೆ. ನೀಟ್ ಪರೀಕ್ಷೆ ತೇರ್ಗಡೆಯಲ್ಲಿ ವಿಫಲರಾಗಿರುವ ಪ್ರತಿಭಾವಂತ ರಿಪೀಟರ್ಸ್ ಗಳನ್ನು ಗುರುತಿಸಿ ಶಿಷ್ಯವೇತನದೊಂದಿಗೆ ವಿಶೇಷ ತರಬೇತಿ ನೀಡಿಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಒಟ್ಟು 5 ಕೋಟಿ ರೂ.ಮೀಸಲಿರಿಸಲಾಗಿದ್ದು, ದೇಶಾದ್ಯಂತ ಒಟ್ಟು 3000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಲ್ಲದೆ, ಕೊರೊನಾದಿಂದ ಪಾಲಕ-ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೂ ಉಚಿತ ನೀಟ್ ಪರೀಕ್ಷೆ ತರಬೇತಿ ನೀಡಲಾಗುವುದು. ಶಿಷ್ಯವೇತನ ಯೋಜನೆಗಾಗಿ ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ವೆಬ್‌ಸೈಟ್ ಮೂಲಕ ನ.15ರೊಳಗಗಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಡಾ.ಅಬ್ದುಲ್ ಖಾದೀರ್ ತಿಳಿಸಿದರು.