ಅಥಣಿ/ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರ ಉದ್ಧಟತನ ಖಂಡಿಸಿ ಹಾಗೂ ಕನ್ನಡ ಚಿತ್ರ ಅವನೇ ಶ್ರೀಮನ್ನಾರಾಯಣ ಪ್ರದರ್ಶನಕ್ಕೆ ಅಡ್ಡಿಪಡಿಸಿ ಕನ್ನಡಿಗರ ಭಾವನೆಗೆ ನೋವುಂಟು ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕದಲ್ಲಿ ಶಿವಸೇನೆಗೆ ಬಹಿಷ್ಕಾರ ಹಾಕುವಂತೆ ಮತ್ತು ಗಡಿ ವಿವಾದ ವಿಚಾರದಲ್ಲಿ ಕರ್ನಾಟಕದ ರಾಜಕಾರಣಿಗಳು ಕನ್ನಡಪರ ಧ್ವನಿ ಎತ್ತುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಅಂಬೇಡ್ಕರ್ ಸರ್ಕಲ್ನಲ್ಲಿ ಸೇರಿದ ಪ್ರತಿಭಟನಾಕಾರರು, ಮಹಾರಾಷ್ಟ್ರ ಸರ್ಕಾರ, ಶಿವಸೇನೆ, ಎಂಇಎಸ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಾಹಿತಿ, ಪತ್ರಕರ್ತ ದೀಪಕ ಶಿಂಧೆ, ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜಕಾರಣಿಗಳು ಗಡಿ ವಿಷಯ ಹಾಗೂ ಭಾಷಾ ಬಾಂಧವ್ಯದ ಮೇಲೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಸದ್ಯ ಗಡಿವಿವಾದ ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ಯಾರೂ ಈ ಈ ಬಗ್ಗೆ ಉದ್ಧಟತನದ ಮಾತನಾಡಬಾರದು ಎಂದರು.