ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದ್ದು, ಗೋಕಾಕ್ ತಾಲೂಕಿನಲ್ಲಿ ಎರಡು ಸೇತುವೆ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಐದು ಸೇತುವೆಗಳು ಮುಳುಗಡೆ ಆಗಿವೆ. ಮತ್ತೊಂದೆಡೆ ಹಿಡಕಲ್ ಜಲಾಶದಿಂದ 23 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ಘಟಪ್ರಭಾ ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ 23ಸಾವಿರ ಕ್ಯೂಸೆಕ್ ನೀರನ್ನು ಸದ್ಯ ಹೊರಕ್ಕೆ ಬಿಡಲಾಗುತ್ತಿದೆ. ಇದಲ್ಲದೇ ಹಿಡಕಲ್ ಜಲಾಶಯ ಸಂಪೂರ್ಣವಾಗಿ 100ರಷ್ಟು ಭರ್ತಿಯಾದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ 40 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುವುದು. ಹೀಗಾಗಿ ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿ ಪಾತ್ರದ ಜನರು ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ಹೋಗಬೇಕೆಂದು ನೀರಾವರಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಗೋಕಾಕ್ ತಾಲೂಕಿನ ಘಟಪ್ರಭಾ ನದಿ ಪಾತ್ರಕ್ಕೆ ಬರುವ ಲೋಳಸೂರ್ ಸೇತುವೆ ಹಾಗೂ ಸಿಂಗಳಾಪೂರ ಸೇತುವೆಗಳು ಮುಳುಗಡೆ ಆಗಿದ್ದು, ಮತ್ತೆ ಪ್ರವಾಹದ ಭೀತಿಯನ್ನು ಎದುರಿಸುವಂತಾಗಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಕೆಳಹಂತದ ಐದು ಸಂಪರ್ಕ ಸೇತುವೆಗಳು ಜಲಾವೃತ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಅಪಾಯದ ಮಟ್ಟವನ್ನು ಮೀರಿ ವೇದಗಂಗಾ ನದಿ ಹರಿಯುತ್ತಿದ್ದು, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೆಳಹಂತದ ಐದು ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ನಿಪ್ಪಾಣಿ ತಾಲೂಕಿನ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ, ಸಿದ್ನಾಳ-ಹುಣ್ಣರಗಿ, ಹುಕ್ಕೇರಿ-ಯರನಾಳ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಇದಲ್ಲದೇ ನಾಲಾ ನೀರು ಬಂದು ನಿಪ್ಪಾಣಿ ತಾಲೂಕಿನ ಲಖನಾಪುರ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕೂಡ ಮುಳುಗಡೆಯಾಗಿದ್ದು, ಐದು ಸೇತುವೆ ಮುಳುಗಡೆ ಹಿನ್ನೆಲೆ ಎಂಟು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಇತ್ತ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲಾ ಪೊಲೀಸರು ಸೇತುವೆ ಮುಂಭಾಗದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಸಂಚಾರ ಬಂದ್ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರಕನ್ನಡದಲ್ಲಿ ಭಾರಿ ಮಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿದ ಭೂಮಿ