ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡ ಕನ್ನಡದ ಶಿಲ್ಪಕಲೆಗಾರ ರಮೇಶ್ ಕಾಂಬಳೆ ಮರಳಿ ಗೂಡು ಸೇರಿದ್ದು ಅತ್ಯಂತ ಅಭಿಮಾನದಿಂದ ಈಟಿವಿ ಭಾರತ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೊನಾ ವೈರಸ್ ಉಪಟಳದಿಂದ ದೇಶವೇ ಲಾಕ್ಡೌನ್ ಆದ ಕಾರಣ ಅದೆಷ್ಟೋ ಮಂದಿ ದುಡಿಯಲು ಬೇರೆ ರಾಜ್ಯಗಳಿಗೆ ಹೋಗಿ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹೀಗೆ ಹೋದವರಲ್ಲಿ ಕನ್ನಡದ ಶಿಲ್ಪಕಲೆಗಾರ ರಮೇಶ ಕಾಂಬಳೆ ಕೂಡಾ ಒಬ್ಬರು. ಇವರು ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಸಿಲುಕಿಕೊಂಡು ಪರದಾಡುತ್ತಿರುವ ಕುರಿತು ಈಟಿವಿ ಭಾರತ ವರದಿ ಬಿತ್ತರಿಸಿತ್ತು. ಈ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ರಮೇಶ ಕಾಂಬಳೆ ಅವರನ್ನು ಹುಟ್ಟೂರಿಗೆ ಕರೆತಂದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕನ್ನಡದ ಶಿಲ್ಪಕಲೆಗಾರ... ಹುಟ್ಟೂರಿಗೆ ಕರೆಸಿಕೊಳ್ಳುವಂತೆ ಕೈಮುಗಿದು ಮನವಿ
ಇವರು ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ಶಿಲ್ಪಕಲೆಗಾರ. ಅಮರಾವತಿ ನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆಯುವ ಕೆಲಸಕ್ಕೆ ಹೋಗಿದ್ದ ವೇಳೆ ಕೊರೊನಾ ಲಾಕ್ಡೌನ್ ಘೋಷಣೆಯಾಗಿದೆ. ಹಾಗಾಗಿ, ಅಲ್ಲಿಯೇ ಸಿಲುಕಿಕೊಂಡಿದ್ದು, ರಾಜ್ಯಕ್ಕೆ ಆಗಮಿಸಲು ಸರ್ಕಾರ ಅನುಕೂಲ ಕಲ್ಪಿಸಬೇಕು ಎಂದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ಈಟಿವಿ ಭಾರತ ಸುದ್ದಿ ಮಾಡಿದ್ದು ಸ್ಪಂದನೆ ಸಿಕ್ಕಿದೆ. ಈಗ ಶಿಲ್ಪಕಲೆಗಾರ ರಮೇಶ ಚಿಕ್ಕೋಡಿ ತಾಲೂಕಿನ ಮಜಲಟ್ಟಿಗೆ ಮರಳಿದ್ದು ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ.
ಈಟಿವಿ ಭಾರತ ವರದಿಯಿಂದ ನನ್ನ ಗ್ರಾಮಕ್ಕೆ ಬರಲು ಅನುಕೂಲವಾಯಿತು ಎಂದು ಹೇಳಿದ ಅವರು ಧನ್ಯವಾದ ಸಲ್ಲಿಸಿದ್ದಾರೆ.