ಬೆಳಗಾವಿ: ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಅಗಿ ಕಣಕ್ಕಿಳಿಯಲಿದ್ದಾರೆ. ಅವರಿಗೇನೇ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ ಕ್ಷೇತ್ರದಲ್ಲಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ. ಲಖನ್ಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಆಗುವ ಲಾಭದ ಕುರಿತು ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮೊದಲ ಪಟ್ಟಿಯಲ್ಲಿ ಗೋಕಾಕ್ ಅಭ್ಯರ್ಥಿ ಘೋಷಿಸದೇ ಇರಬಹುದು. ಆದರೆ, ಲಖನ್ಗೆ ಗೋಕಾಕ್ ಟಿಕೆಟ್ ಪಕ್ಕಾ ಸಿಗಲಿದೆ. ಬೇರೆಯವರು ಅರ್ಜಿ ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಟಿಕೆಟ್ ನೀಡಬೇಕೆಂದೇನಿಲ್ಲ ಎಂದರು.
ಚುನಾವಣೆ ನಡೆಸುವುದು ಪ್ರಸ್ತುತ ದಿನದಲ್ಲಿ ಸುಲಭದ ಮಾತಲ್ಲ. ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟಿಸಲಾಗುತ್ತಿದೆ ಎಂದ ಅವರು, ಜಿಲ್ಲಾ ಪಂಚಾಯತ್ನಲ್ಲಿ ಆಡಳಿತಾತ್ಮಕವಾಗಿ ದೊಡ್ಡಮಟ್ಟದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನಮ್ಮ ಸಂಖ್ಯೆ ಹೆಚ್ಚಿದೆ ಎಂದು ಜನರ ಗಮನ ಸೆಳೆಯಲು ರಮೇಶ್ ಈ ತಂತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ನಡೆಯನ್ನು ಸತೀಶ್ ಖಂಡಿಸಿದರು.
ಗೋಕಾಕ್ ಕ್ಷೇತ್ರದ ಮತ್ತೊಂದು ಭ್ರಷ್ಟಾಚಾರದ ಕುರಿತಾದ ಹಾಡನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅಂಕಲಗಿ ಗ್ರಾಮದ ಶೌಚಗೃಹ ನಿರ್ಮಾಣದಲ್ಲಿ ಆದ ಭ್ರಷ್ಟಾಚಾರ ಕುರಿತ ಹಾಡು ಇದಾಗಿದೆ ಎಂದು ಸತೀಶ್ ಮಾಹಿತಿ ನೀಡಿದ್ರು.