ಬೆಳಗಾವಿ: ಉಪಚುನಾವಣೆಯ ಸೋಲಿನಿಂದ ಮಾನಸಿಕವಾಗಿ ನೊಂದು ಸಿಎಲ್‌ಪಿ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಂಡೂರಾವ್ ರಾಜೀನಾಮೆ ನೀಡಿರಬಹುದು. ಈ ಉಭಯ ನಾಯಕರ ಮನವೊಲಿಸುತ್ತೇವೆ. ಪಕ್ಷಕ್ಕೆ ಅವರು ಅನಿವಾರ್ಯವಾಗಿದ್ದು, ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋಕಾಕ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಲ, ವಲಸಿಗರು ಅನ್ನೋ ತಾರತಮ್ಯ ಕಾಂಗ್ರೆಸ್ನಲ್ಲಿಲ್ಲ. ಗುಂಪುಗಾರಿಕೆ, ಭಿನ್ನಾಭಿಪ್ರಾಯ ಎಲ್ಲ ಪಕ್ಷಗಳಲ್ಲಿ ಸಹಜವಾಗಿ ಇದ್ದೇ ಇರುತ್ತವೆ ಎಂದರು. ಇನ್ನು ಮೂಲ ಕಾಂಗ್ರೆಸ್ಸಿಗರು ಪ್ರಚಾರದಲ್ಲಿ ಭಾಗಿಯಾಗದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಅವರು, ಪಕ್ಷದ ವೋಟ್ ಮೇಲೆ ನಾವು ಗೆಲ್ತೇವೆಯೇ ಹೊರತು ಲೀಡರ್ಗಳಿಂದ ಅಲ್ಲ. ಲೀಡರ್ ಬದಲಾಗ್ತಾ ಇರ್ತಾರೆ, ಆದ್ರೆ ಪಕ್ಷದ ಗುರುತಿನ ಮೇಲೆ ನಮ್ಮ ಗೆಲುವಾಗುತ್ತದೆ. ಅಥಣಿ, ಕಾಗವಾಡ, ಗೋಕಾಕ್‌ದಲ್ಲಿ ನಮ್ಮ ವೋಟ್ ಬ್ಯಾಂಕ್ ಎಷ್ಟಿತ್ತೋ ಅಷ್ಟನ್ನು ಪಡೆದಿದ್ದೇವೆ ಎಂದು ಹೇಳಿದ್ರು.
ಧರ್ಮ- ಜಾತಿ ಆಧಾರದ ಮೇಲೆ ಈ ಉಪಚುನಾವಣೆ ನಡೆದಿದೆ. ಸರ್ಕಾರ ಬೀಳಿಸುತ್ತೇವೆಂಬ ಸಿದ್ದರಾಮಯ್ಯರ ಹೇಳಿಕೆಯೂ ನಮಗೆ ಮುಳುವಾಯ್ತು. ಗೋಕಾಕ್‌ನಲ್ಲಿ ನಮ್ಮದೇ ಆದ ವೋಟ್ ಬ್ಯಾಂಕ್ ಮಾಡಿದ್ದೇವೆ. ಇಷ್ಟೆಲ್ಲ ಒತ್ತಡದ ನಡುವೆಯೂ ಜನರು ನಮ್ಮ ಬೆಂಬಲಕ್ಕಿದ್ದರು. ಸರ್ಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿಗೆ ಗೆಲುವಾಗಿದೆ. ಸ್ಥಳೀಯ ವಿಷಯಗಳ ಬಗ್ಗೆ ಜನರು ಗಮನ ಕೊಡಲಿಲ್ಲ. ಹೀಗಾಗಿ ಬಿಜೆಪಿಗೆ ಜಯ ಲಭಿಸಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಇನ್ನು, ಗೋಕಾಕ್ ನಗರಸಭೆಯ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡಲೇಬೇಕು. ನಗರಸಭೆಯಲ್ಲಿ ಆಗಿರುವ ಅವ್ಯವಹಾರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರಮೇಶ್ ಜಾರಕಿಹೊಳಿ ಇನ್ನು ಮುಂದೆ ಒಂದಿನ, ಎರಡು ದಿನ ಮಾತ್ರ ಕ್ಷೇತ್ರಕ್ಕೆ ಬರ್ತಾರೆ. ಆಮೇಲೆ ಬೆಂಗಳೂರು, ಮುಂಬೈನಲ್ಲಿ ಇರ್ತಾರೆ ಅಷ್ಟೇ. ರಮೇಶ್ ಸಚಿವರಾಗೋದು ಅವರ ಸ್ವಂತ ಲಾಭಕ್ಕೆ. ಇದರಿಂದ ನಮ್ಮ ಭಾಗಕ್ಕೆ, ನಮ್ಮ ಜಿಲ್ಲೆಗೆ ಏನೂ ಲಾಭ ಆಗಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು.
ಬೆಳಗಾವಿಗೆ 6 ಜನ ಸಚಿವರಾಗುತ್ತಿದ್ದಾರೆ. ತಾಲೂಕಿಗೆ ಒಬ್ಬರಂತೆ ಸಚಿವರನ್ನು ನೇಮಿಸಬೇಕು. ಖಾತೆ ಹಂಚಿಕೆ ನಂತರ ಹೊರಗಿನವರು, ಒಳಗಿನವರು ಅಂತ ಬಿಜೆಪಿಯಲ್ಲೂ ಸಮಸ್ಯೆ ಆರಂಭವಾಗುತ್ತದೆ. ಸರ್ಕಾರ ಬೀಳುತ್ತೆ ಅಂತ ಬಹಳ ಜನ ಬಿಜೆಪಿಗೆ ವೋಟ್ ಹಾಕಿದ್ದಾರೆ. ಮತ್ತೆ ಚುನಾವಣೆ ಆಗೋದು ಬೇಡ ಎಂಬ ಭಾವನೆಯಲ್ಲಿ ಜನ ಬಿಜೆಪಿಗೆ ಮತ ಹಾಕಿರಬಹುದು. ಸಿದ್ದರಾಮಯ್ಯ ಏಕಾಂಗಿ ಆಗಿದ್ದಾರೆ ಅಂತೇನಿಲ್ಲ. ಸಿದ್ದರಾಮಯ್ಯ ಜೊತೆಗೆ ನಾವೆಲ್ಲರೂ ಇದ್ದೇವೆ. ಸಿದ್ದರಾಮಯ್ಯಗೆ ಬೆಂಬಲ ಇದೆ ಅಂತಾನೇ ಅವರನ್ನು ಸಿಎಲ್‌ಪಿ ಲೀಡರ್ ಮಾಡಿದ್ದಾರೆ ಎಂದರು.