ಬೆಳಗಾವಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುದು ರಾಜ್ಯದ ಶೇ.೯೯ ರಷ್ಟು ಜನರ ಅಭಿಪ್ರಾಯ. ಆದ್ರೆ, ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ಜನರಿಗೆ ವಾಸ್ತವ ತಿಳಿಸಬೇಕಾದ ಜವಾಬ್ದಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು ವಸ್ತುವಿನಿಂದ ಸರ್ಕಾರ ಉರುಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವೀಲ್ ಮಾಡುತ್ತೇನೆ ಎಂದರು.
ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯೆಯಿದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನ ಮಾಡಿದ್ದಾರೆ ಎಂದು ಸತೀಶ್ ಆರೋಪಿಸಿದರು.
ಇನ್ನು ಆಪರೇಷನ್ ಕಮಲದ ಬಗ್ಗೆ ಮೊದಲೇ ನಾನು ಹಿರಿಯ ನಾಯಕರಿಗಳಿಗೆ ತಿಳಿಸಿದ್ದೆ. ಹೈ ಕಮಾಂಡ್ ನನ್ನ ಮಾತನ್ನು ಸಿರಿಯಸ್ ಆಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ. ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಿದ್ರೆ ನಾವು ಸಕ್ಸಸ್ ಆಗುತ್ತಿದ್ದೆವು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.