ಬೆಳಗಾವಿ: ಹಿಂದೂ ಪದದ ಬಗ್ಗೆ ನಾನು ತಪ್ಪು ಮಾತನಾಡಿದ್ದೇನೆ ಅಂತಾ ಸಾಬೀತಾದರೆ ಕ್ಷಮೆ ಅಷ್ಟೇ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೆ ಓದಿದ್ದಾರೆ. ಹಿಂದೂ ಪರ್ಷಿಯನ್ ಶಬ್ದ. ಅದಕ್ಕೆ ದಾಖಲೆ ಇದೆ. ವಿಕಿಪೀಡಿಯಾದಲ್ಲಿ ನೋಡಬಹುದು ಅಂತಾ ಹೇಳಿದ್ದೇನೆ. ಕೆಟ್ಟ ಶಬ್ದ ಬಳಸಿದ್ದು ಡಿಕ್ಷನರಿಯಲ್ಲಿ ಇದೆ. ಆ ಡಿಕ್ಷನರಿ 1963ರಲ್ಲಿ ಪ್ರಿಂಟ್ ಆಗಿದೆ. ನಾನು ಏನು ಹೇಳಿದೀನಿ, ಇದರ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದ್ದೇನೆ ಎಂದರು.
ವಿಕಿಪೀಡಿಯಾದಲ್ಲಿ ಇದ್ದಿದ್ದನ್ನು ಹೇಳಿದ್ದೇನೆ: ಹಿಂದೂ ಪದ ಅಶ್ಲೀಲವಾಗಿ ಅಂತಾ ಆ ಡಿಕ್ಷನರಿಯಲ್ಲಿದೆ. ಇವರು ತಮಗೆ ಬೇಕಾದ ಹಾಗೇ ಹೇಳಿದರೆ ನಾನು ಹೇಗೆ ಉತ್ತರ ಕೊಡಕಾಗುತ್ತದೆ. ವಿಕಿಪೀಡಿಯಾದಲ್ಲಿ ಇದ್ದಿದ್ದನ್ನು ಹೇಳಿದ್ದೇನೆ. ಅದನ್ನ ನೋಡಿ ಇಡೀ ರಾಷ್ಟ್ರದಲ್ಲಿ ಮುಂದುವರಿಸಿದ್ದಾರೆ. ವಿಕಿಪೀಡಿಯದಲ್ಲಿ ಯಾರಾದರೂ ಬರೆಯಬೇಕಾದರೆ ಕಮಿಟಿ ಇದೆ. ಹಾಗೇ ಅದನ್ನು ಅಪ್‌ಲೋಡ್ ಮಾಡಬಹುದು. ನಾವು ಯಾರ ಬಗ್ಗೆಯೂ ಮಾತನಾಡಲ್ಲ. ನಿಮ್ಮ ಪ್ಯಾನಲ್ ಡಿಸ್ಕಷನ್‌ಲ್ಲಿ ಚರ್ಚೆ ಮಾಡಬೇಕು. ಯಾರು ಬೇಕಾದರೂ ಬರಲಿ. ನನ್ನ ಸ್ಟ್ಯಾಂಡ್ ಏನಿದೆಯೋ ಅದನ್ನು ಹೇಳುತ್ತೇನೆ. ಯಾರೂ ಸಹ ನಮ್ಮ ನಿಲುವು ನೋಡಿಯೇ ಇಲ್ಲ. ನ್ಯಾಷನಲ್ ಮೀಡಿಯಾದಲ್ಲಿ ಬಂದ ತಕ್ಷಣ ಒಂದ್ ಸ್ಟ್ಯಾಂಡ್ ಆಗಿದೆ ಎಂದು ಪ್ರತಿಕ್ರಿಯಿಸಿದರು.
ಜಾತಿ ನೋಡಿ ಕೆಲಸ ಮಾಡಲ್ಲ: ತಮಗೆ ಬೈದಿದ್ದನ್ನು ತಾವು ನೋಡಿಕೊಂಡಿಲ್ಲ. ಇದರ ಬಗ್ಗೆ ಹೀಗೆ ಹೇಳಿದೀರಿ ಅದನ್ನು ಚರ್ಚೆ ಮಾಡಿ ಎಂದಿದ್ದೇನೆ. ಡಿಕ್ಷನರಿಯಲ್ಲಿ ಹಿಂದೂ ಪದದ ಅರ್ಥ ಏನು ಅಂತಾ ಇದೆ. ಕೆಟ್ಟ ಶಬ್ದ ಉಪಯೋಗ ಮಾಡಿದ್ದಾರೆ ಎಂದರ್ಥ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅರ್ಥ ಅಶ್ಲೀಲ ಎಂಬುದು ಇದೆ. ವಾಜಪೇಯಿಯವರು ಸಹ ಹಿಂದೂ ಪದ ಪರ್ಷಿಯನ್‌ನಿಂದ ಬಂದಿದ್ದು ಅಂತಾ ಹೇಳಿದ್ದಾರೆ. ನಾವು ಯಾವುದೇ ಜಾತಿ ನೋಡಿ ಕೆಲಸ ಮಾಡಲ್ಲ ಎಂದು ತಿಳಿಸಿದರು.
ನೀವು ಹಿಂದೂನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಭಾರತೀಯ ಎಂದರು. ಪಕ್ಷದ ಹೇಳಿಕೆ ಬೇರೆ, ಇದು ವೈಯಕ್ತಿಕ. ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ. ಪಕ್ಷಕ್ಕೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ವ್ಯವಸ್ಥಿತ ಷಡ್ಯಂತ್ರ: ಸತೀಶ್ ಜಾರಕಿಹೊಳಿ ಅರೆ ಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ, ನಾನು ಅರೆ ಬರೆ ಓದಿಕೊಂಡಿಲ್ಲ. ನಾವು ಹಿಂದೂಗೆ ಎಲ್ಲಿ ಅವಮಾನ ಮಾಡಿದ್ದೀವಿ ಅಂತಾ ಸಾಬೀತು ಮಾಡಬೇಕು. ಹಲವು ಬಿಜೆಪಿ ನಾಯಕರೇ ಹಿಂದೂ ಪದ ಪರ್ಷಿಯನ್‌ನಿಂದ ಬಂದಿದೆ ಅಂತಾ ಹೇಳಿದ್ದಾರೆ. ಮನುವಾದಿಗಳು ಹಾಗೂ ಸಿಸ್ಟಮ್ ಇದೆ. ವ್ಯವಸ್ಥಿತವಾಗಿ ಇದನ್ನ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷಮೆ ಕೇಳುವ ಪ್ರಶ್ನೆ ಇಲ್ಲ: ನನ್ನ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಖಂಡಿಸಿದ್ದಾರೆ. ಅವರು ನಮಗಿಂತ ಹಿರಿಯರು, ಅದಕ್ಕೆ ನಾನು ಆಕ್ಷೇಪ ಮಾಡಲ್ಲ. ನಾವು ಮಾಡಿದ್ದಾದರೂ ಏನು?. ನಾವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ. ಸಿಎಂ ಬೊಮ್ಮಾಯಿ ಬೇಕಾದರೆ ಒಂದು ಕಮಿಟಿ ಮಾಡಲಿ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅಶ್ಲೀಲ ಅಂತಾ ಬರೆದಿದೆ. ಆ ಬಗ್ಗೆ ಚರ್ಚೆ ಮಾಡಿ ಹೇಳಿದರು.
ಸಿಎಂ ತನಿಖೆ ಮಾಡಿಸಲಿ: 1963ರಲ್ಲಿ ಆ ಡಿಕ್ಷನರಿ ಪ್ರಕಟ ಆಗಿದೆ. ಅದನ್ನ ನೋಡಿ. ಯಾವುದೇ ಸಮಾಜದವರಿಗೆ ಬೈದರೆ ನೋವಾಗುತ್ತದೆ. ಅಶ್ಲೀಲ ಪದ ಅನ್ನೋದು ಡಿಕ್ಷನರಿಯಲ್ಲಿದೆ. ನಾನು ಬರೆದಿದ್ದೀನಾ?. "ಹಿಂದೂ ಪದದ ಅರ್ಥ ಕೆಟ್ಟದ್ದಿದೆ ನೋಡಿ, ಅದರ ಬಗ್ಗೆ ಚರ್ಚೆ ಮಾಡಿ ಅಂತಾ ಹೇಳಿದ್ದೇನೆ". ನಿಮ್ಮ ಕಡೆ ಏನಾದರೂ ದಾಖಲೆ ಇದ್ದರೆ ಮುಂದುವರಿಸಿ. ಅವರದ್ದೇ ಸರ್ಕಾರ ಇದೆ. ಸಿಎಂ ತನಿಖೆ ಮಾಡಿಸಲಿ. ಒಂದು ಕಮಿಟಿ ರಚಿಸಲಿ. ಆಗ ಸತ್ಯಾಸತ್ಯತೆ ಹೊರಗ ಬರುತ್ತದೆ. ಬೇರೆ ಪುಸ್ತಕಗಳಲ್ಲಿ ಉಲ್ಲೇಖ ಇದೆ. ವಿಕಿಪೀಡಿಯಾದಲ್ಲಿ ಇದೆ ಅಂತಾ ಸುರ್ಜೆವಾಲಾರಿಗೂ ತಿಳಿಸಿದ್ದೇನೆ. ನಾನು ಚುನಾವಣೆ ದೃಷ್ಟಿಯಿಂದ ಹೇಳಿದ್ದಲ್ಲ. ಈ ಬಗ್ಗೆ ಸಾಮೂಹಿಕ ಚರ್ಚೆ ಮಾಡಬೇಕು. ನಾಲ್ಕು ಜನ ಚರ್ಚೆ ಮಾಡಿದ್ದನ್ನು ನಾವು ಒಪ್ಪಿಕೊಳ್ಳಲ್ಲ. ಸತ್ಯ ಹೇಳೋದೇ ಅಪರಾಧ. ಎಲ್ಲರಿಗೂ ನ್ಯಾಯ ಕೊಡಿಸುವುದೇ ಅಪರಾಧ ಎನ್ನುವಂತಾಗಿದೆ. ನಾನು ಪರ್ಷಿಯನ್ ಪದ ಅಂತಾ ಹೇಳಿದ್ದು. ಅದರ ಬಗ್ಗೆ ಚರ್ಚೆ ಆಗಬೇಕು ಅಂತಾ ಒತ್ತಾಯಿಸಿದ್ದೇನೆ. ಅದು ಸತೀಶ್ ಜಾರಕಿಹೊಳಿ ಸಂಶೋಧನೆ ಮಾಡಿ ಬರೆದ ಬುಕ್ ಅಲ್ಲ. ಯಾರೂ ಚರ್ಚೆಗೆ ಬರ್ತಾರೋ ಬರಲಿ. ಚರ್ಚೆಗೆ ನಾನೂ ಕೂಡ ಸಿದ್ಧ ಎಂದು ಸವಾಲು ಹಾಕಿದರು.
ಯಡಿಯೂರಪ್ಪ, ಬೊಮ್ಮಾಯಿಗೆ ಒಂದು ಕಮಿಟಿ ರಚನೆ ಮಾಡಲು ಹೇಳಿ. ಅದರಲ್ಲಿ ತಪ್ಪು ಸಾಬೀತಾದರೆ ಕ್ಷಮೆ ಅಲ್ಲ, ರಾಜೀನಾಮೆ ಸಹ ನೀಡುತ್ತೇನೆ. ಯಾರು ಬರೆದಿದ್ದಾರೋ ಅವರ ಮೇಲೆ ಕೇಸ್ ಹಾಕಿ ಫೈಟ್ ಮಾಡಬೇಕು. ಇಂತಹ ವಿಷಯಗಳ ಮೇಲೆ ಹಿಂದುತ್ವ ಗಟ್ಟಿ ಮಾಡೋದು ಬಿಜೆಪಿಯವರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಜಾರಕಿಹೊಳಿ ಹೇಳಿಕೆ ವಿರುದ್ಧ ಕೆರಳಿದ ಕೇಸರಿ ಪಡೆ: 'ಸ್ವಾಭಿಮಾನಿ ಹಿಂದೂ ಅಭಿಯಾನ' ಆರಂಭಿಸಿದ ಸುನಿಲ್ ಕುಮಾರ್