ಬೆಳಗಾವಿ: ಈ ಬಜೆಟ್ ಪ್ರಣಾಳಿಕೆ ಬಜೆಟ್ ಎಂದು ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಅವರದ್ದು ಹಿಂದಿನ ಬಜೆಟ್ ಹಾಗೇ ಆಗಿದ್ದರೆ, ನಮ್ಮದು ಹಾಗೇ ಅಂದುಕೊಳ್ಳಲಿ ಎಂದಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ವಿಕ್ಷಪದವರಿಂದ ಟೀಕೆ ಸ್ವಾಭಾವಿಕ. ಆದರೆ, ಬಜೆಟ್ ಬಗ್ಗೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ರಾಜಕೀಯ ಮಾಡುವುದಕ್ಕಾಗಿ ವಿಪಕ್ಷದವರು ವಿರೋಧ ಮಾಡ್ತಾರೆ. ಸರ್ಕಾರದ ಗ್ಯಾರಂಟಿ ಯೋಜನೆಗೆ ಅನುದಾನ ಕೊಟ್ಟು, ಹೊಸ ಯೋಜನೆ ಘೋಷಣೆ ಮಾಡಲಾಗಿದೆ. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ. ಈ ಬಜೆಟ್ ಸರ್ಕಾರಕ್ಕೆ, ಪಕ್ಷಕ್ಕೆ ಅನುಕೂಲ ಆಗಲಿದೆ. ಬಜೆಟ್ ಪರಿಣಾಮ ಎಂಪಿ ಎಲೆಕ್ಷನ್ ವರೆಗೂ ಕಾದು ನೋಡೋಣ. ಅವರದ್ದಾಗಲಿ, ನಮ್ಮದಾಗಲಿ ಬಜೆಟ್ ಅನ್ನು ಅಧಿಕಾರಿಗಳು ಮಾಡ್ತಾರೆ. ಅಬಕಾರಿ ಸುಂಕ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿ, ಪ್ರತಿಭಟನೆ ಮಾಡದ ಏಕೈಕ ಇಲಾಖೆ ಎಂದರೆ ಅದು ಅಬಕಾರಿ, ಇದು ಒಂಥರ ವಿಚಿತ್ರ ಇಲಾಖೆ, ಶೇ.20ರಷ್ಟು ಮಾತ್ರ ನಾವು ತೆರಿಗೆ ಹೆಚ್ಚಿಸಿದ್ದೇವೆ. ಗೋವಾ ಬಿಟ್ಟು ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿಯೇ ಮದ್ಯದ ದರ ಕಡಿಮೆಯಿದೆ ಎಂದು ಹೇಳಿದರು.
ಲೋಕಸಭೆಗೆ ಪುತ್ರಿ ಸ್ಪರ್ಧೆ ಬಗ್ಗೆ ಸತೀಶ್ ಹೇಳಿದ್ದೇನು?: ಲೋಕಸಭೆ ಚುನಾವಣೆಗೆ ಇನ್ನು ಕೇವಲ 8 ತಿಂಗಳು ಮಾತ್ರ ಬಾಕಿಯಿದೆ. ಹೀಗಾಗಿ ತಯಾರಿ ಮಾಡಿಕೊಳ್ಳುತ್ತೇವೆ. ಆದರೆ ಬಜೆಟ್ ಅಧಿವೇಶನ ಮುಗಿದ ಬಳಿಕ ಅದಕ್ಕೆ ಹೆಚ್ಚಿನ ಗಮನ ಕೊಡುತ್ತೇವೆ ಎಂದ ಸತೀಶ್ ಜಾರಕಿಹೊಳಿ, ಪಕ್ಷ ಬಯಸಿದರೆ ನಿಮ್ಮ ಮಗಳು ಪ್ರಿಯಾಂಕಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಮೊದಲು ನಮ್ಮ ಶಾಸಕರಲ್ಲಿ ಹೊಂದಾಣಿಕೆ ಆಗಬೇಕು. ಒಮ್ಮತದ ಅಭಿಪ್ರಾಯ ಮೂಡಬೇಕು. ನಾವು ಹೇಳಿದ್ದನ್ನು ಪಕ್ಷ ಅಂತಿಮವಾಗಿ ಪರಿಗಣಿಸುತ್ತದೆ. ಆದರೆ, ಶಾಸಕರ ಜೊತೆಗೆ ಚರ್ಚಿಸಿದ ನಂತರವೇ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಟಿಕೆಟ್ ಪಟ್ಟಿಯಲ್ಲಿ ತಮ್ಮ ಪುತ್ರಿ ಹೆಸರು ಇರುತ್ತಾ ಎಂಬ ಬಗ್ಗೆ ಶಾಸಕರು, ಕಾರ್ಯಕರ್ತರ ನಿರ್ಧಾರದಂತೆ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.
ಪೆನ್ ಡ್ರೈವ್ ಬಿಡುಗಡೆ ಆಗಲು ಮುಹೂರ್ತ ಕೂಡಿ ಬರಬೇಕು: ಮಾಜಿ ಸಿಎಂ ಕುಮಾರಸ್ವಾಮಿ ಪೆನ್ ಡ್ರೈವ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೊಸ ಸರ್ಕಾರ ಬಂದಾಗ ವರ್ಗಾವಣೆ ಸ್ವಾಭಾವಿಕ. ಇನ್ನು ಕುಮಾರಸ್ವಾಮಿ ಅವರ ಪೆನ್ ಡ್ರೈವ್ ನಲ್ಲಿ ಏನಿದೆ ಎಂಬುದು ಹೊರಗೆ ಬಂದರೆ ಮಾತ್ರ ಗೊತ್ತಾಗುತ್ತೆ. ಪೆನ್ ಡ್ರೈವ್ ಅವರ ಕಡೆಗೆ ಇದೆ. ಅದನ್ನು ಪ್ಲೇ ಮಾಡುವುದು, ಸಾಬೀತು ಮಾಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅದಕ್ಕೆ ಅವರು ಸ್ವತಂತ್ರರು. ಇನ್ನು ಅವರು ಏನೂ ಹೇಳದೇ ಕಲ್ಪನೆ ಮಾಡಿಕೊಂಡು ಹೇಳಲು ಬರುವುದಿಲ್ಲ. ಅದು ಬಿಡುಗಡೆ ಆಗಲು ಮುಹೂರ್ತ ಕೂಡಿ ಬರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಪ್ರಾದೇಶಿಕ ಆಯುಕ್ತರು, ನಗರ ಪೊಲೀಸ್ ಆಯುಕ್ತರಂತ ಹುದ್ದೆಗಳಿಗೆ ಬೆಂಗಳೂರು ಬಿಟ್ಟು ಬೆಳಗಾವಿಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಹಿಂದೇಟು ಏನಿಲ್ಲ. ಬೆಂಗಳೂರು ಬಿಟ್ಟು ಅವರು ಬರಬೇಕಷ್ಟೇ. ಬಹಳಷ್ಟು ಜನ ಬೆಂಗಳೂರಿನಲ್ಲಿ ಇರಲು ಇಷ್ಟ ಪಡುತ್ತಾರೆ. ಆದರೆ, ನೌಕರಿ ಮಾಡಲು ರಾಜ್ಯದ ಎಲ್ಲಿಗೆ ಆದರೂ ಅವರು ಹೋಗಲೇಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಯಾಕೆಂದರೆ ಬೆಂಗಳೂರಿಗೆ ಸರಿಸಮಾನವಾಗಿ ಬೆಳಗಾವಿ ಕೂಡ ಬೆಳದಿದೆ ಎಂದರು.
ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆದ ಹಿನ್ನೆಲೆ ಬೆಳಗಾವಿಯ ಖಾಸಗಿ ಎಪಿಎಂಸಿ ಮೇಲೆ ಪರಿಣಾಮ ಬೀರುತ್ತಾ ಎಂಬ ವಿಚಾರಕ್ಕೆ ಖಾಸಗಿ ಎಪಿಎಂಸಿ ಮೇಲೆ ಪರಿಣಾಮ ಆಗಿಯೇ ಆಗುತ್ತದೆ. ಸರ್ಕಾರಿ ಎಪಿಎಂಸಿಗೆ ಖಂಡಿತವಾಗಲೂ ಮರು ಜೀವ ಬರುತ್ತದೆ. ಅದು ರೈತರದ್ದು ಅದನ್ನು ಬೆಳೆಸುವುದು ಸರ್ಕಾರದ ಕರ್ತವ್ಯ. ಕಾನೂನು ಬಾಹಿರವಾಗಿದೆ ಎಂದು ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ.
ಅದರಲ್ಲಿ ಏನಾಗುತ್ತೆ ನೋಡಿ ಮುಂದೆ ನಿರ್ಧರಿಸುತ್ತೇವೆ ಎಂದರು. ಚಿಕ್ಕೋಡಿಯಲ್ಲಿ ಜೈನ ಮುನಿಗಳ ಬರ್ಬರ ಹತ್ಯೆ ಬಗ್ಗೆ ವೈಯಕ್ತಿಕ ಸಮಸ್ಯೆಯಿಂದ ಮುನಿ ಮಹಾರಾಜರ ಕೊಲೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕುಮಾರಸ್ವಾಮಿ ಬಳಿ ಪೆನ್ ಡ್ರೈವ್ ಇರಬಹುದು, ಆದ್ರೆ ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ: ಸಚಿವ ಕೆಎನ್ ರಾಜಣ್ಣ