ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯಮಕನಮರಡಿ ವಿಧಾನಸಭೆ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೇರಿದ್ದಾರೆ. ಈ ಮೂಲಕ ಜಾರಕಿಹೊಳಿ ಕುಟುಂಬಕ್ಕೆ ರಾಜಕೀಯವಾಗಿ ಮತ್ತೊಂದು ಪ್ರಾತಿನಿಧ್ಯ ದೊರೆತಿದೆ.
ಮೈತ್ರಿ ಸರ್ಕಾರ ಪತನದ ರೂವಾರಿ ರಮೇಶ್ ಜಾರಕಿಹೊಳಿ ಅವರು ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿದ ರಮೇಶ್ ಶಾಸಕರಾಗಿ ಮರು ಆಯ್ಕೆಯಾದರು. ಅಲ್ಲದೇ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲದಂತಹ ಮಹತ್ವದ ಖಾತೆ ಗಿಟ್ಟಿಸಿಕೊಂಡರು. ಬಿಜೆಪಿಯಲ್ಲಿರುವ ಜಾರಕಿಹೊಳಿ ಕುಟುಂಬದ ಇನ್ನೋರ್ವ ಸದಸ್ಯ ಹಾಗೂ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. ಇತ್ತ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ಹುದ್ದೆಗೇರಿದ್ದಾರೆ. ಆ ಮೂಲಕ ಜಾರಕಿಹೊಳಿ ಕುಟುಂಬಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆತಂತಾಗಿದೆ.
![Satish appointed as KPCC president](https://etvbharatimages.akamaized.net/etvbharat/prod-images/6370803_fjkjk.jpg)
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಟ್ಟು, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆಗ ಅಸಮಾಧಾನಗೊಂಡಿದ್ದ ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆ ಗಿಟ್ಟಿಸಿಕೊಂಡಿದ್ದರು. ಬಳಿಕ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಎಐಸಿಸಿ ಹುದ್ದೆಗೆ ಸತೀಶ್ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ಬಂಡಾಯ ಸೃಷ್ಟಿಸಿದ ಆರೋಪದ ಮೇಲೆ ರಮೇಶ್ ಅವರನ್ನು ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಸಂಪುಟದಿಂದ ಕೈಬಿಟ್ಟು ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಬಳಿಕ ರಾಜಕೀಯದಲ್ಲಾದ ಅನಿರೀಕ್ಷಿತ ಬೆಳವಣಿಗೆಯಿಂದ ಮೈತ್ರಿ ಸರ್ಕಾರ ಪತನವಾಯಿತು.
ರಾಜಕೀಯ ಹಿನ್ನೆಲೆ:
1998ರಲ್ಲಿ ಜೆಡಿಎಸ್‌ನಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಮೂಲಕ ಸತೀಶ್ ಜಾರಕಿಹೊಳಿ ರಾಜಕೀಯ ಪ್ರವೇಶ ಪಡೆದರು. ಸತೀಶ್, ಜಾರಕಿಹೊಳಿ ಕುಟುಂಬದಿಂದ ರಾಜಕೀಯಕ್ಕೆ ಪ್ರವೇಶಿಸಿದ ಮೊದಲಿಗರು. 2004ರಲ್ಲಿ ಧರಂಸಿಂಗ್ ನೇತೃತ್ವದ ಸರ್ಕಾರದಲ್ಲಿ ಸತೀಶ್ ಜವಳಿ ಮಂತ್ರಿ ಆಗಿದ್ದರು. 2005ರಲ್ಲಿ ಸತೀಶ್ ಎರಡನೇ ಅವಧಿಗೂ ಪರಿಷತ್ತಿಗೆ ಆಯ್ಕೆ ಆಗಿದ್ದರು. 2008 ರಲ್ಲಿ ಜೆಡಿಎಸ್ ತೊರೆದ ಸತೀಶ್ ಕಾಂಗ್ರೆಸ್ ಸೇರ್ಪಡೆಯಾಗಿ ಯಮಕನಮರಡಿ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. ಅಲ್ಲಿಂದ ಇಲ್ಲಿಯತನಕ ಸತೀಶ್ ಮೂರು ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದು ಅಬಕಾರಿ, ಸಣ್ಣ ಕೈಗಾರಿಕೆ, ಅರಣ್ಯ ಖಾತೆ ನಿಭಾಯಿಸಿದ್ದಾರೆ.