ಬೆಳಗಾವಿ: ಪ್ರವಾಹದ ಪರಿಹಾರಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ರಾಮದುರ್ಗ ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಪ್ರತಿಭಟನಾ ನಿರತರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಪರಿಹಾರ ಕೊಡಿಸುವುದಾಗಿ ಜಾರಕಿಹೊಳಿ ಭರವಸೆ ನೀಡುತ್ತಿದ್ದಂತೆ ಧರಣಿ ನಿರತರು ಪ್ರತಿಭಟನೆ ಹಿಂಪಡೆದರು.
ಕಳೆದ ವರ್ಷದ ಪ್ರವಾಹಕ್ಕೆ ಮನೆ ಉರುಳಿದ್ದು, ಬೆಳೆ ಹಾನಿಯಾಗಿದ್ದರೂ ಬಹುತೇಕ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸರ್ಕಾರದ ಕ್ರಮ ಖಂಡಿಸಿ ರಾಮದುರ್ಗ ತಾಲೂಕಿನ ಅವರಾದಿ, ಹಿರೇಹಂಪಿಹೊಳಿ, ಸುರೇಬಾನ ಗ್ರಾಮಸ್ಥರು ಮೂರು ದಿನಗಳಿಂದ ರಾಮದುರ್ಗ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು.
ಇಂದು ರಾಮದುರ್ಗಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ನಾನಿಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೇನೆ. ಕಳೆದ ಒಂದು ವರ್ಷದಿಂದ ಹೋರಾಟ ಮಾಡಿದ್ದೀರಿ, ನಮಗೆ ದುಃಖ ಆಗಿದೆ. ನಿಮ್ಮ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಕಾನೂನು ತೊಡಕುಗಳು ಇದ್ದಿದ್ದಕ್ಕೆ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ಮನೆ ಬಿದ್ದವರಿಗೆ ಪರಿಹಾರದ ತೊಂದರೆಯಾಗಿದೆ ಎಂದರು.
ಕೊರೊನಾ ಇದ್ದಿದ್ದಕ್ಕೆ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ನಮಗೆ ಸಮಯ ಕೊಡಿ, ಯಾವುದಾದರೂ ಹಾದಿ ಹಿಡಿದು ಪರಿಹಾರ ತಂದು ಕೊಡುತ್ತೇನೆ. ಧರಣಿ ಮುಂದುವರಿಸಿದ್ದೇ ಆದ್ರೇ ನಮ್ಮ ಶಕ್ತಿ ಕಡಿಮೆಯಾಗುತ್ತೆ. ನೀವು ಧರಣಿ ಹಿಂಪಡೆದರೆ ಹೆಚ್ಚಿನ ಶಕ್ತಿ ಬರುತ್ತೆ. ಸೋಮವಾರ ಬೆಳಗ್ಗೆ ಸಿಎಂ ಭೇಟಿಯಾಗಿ ಮೊದಲು ನಿಮ್ಮ ವಿಷಯ ಚರ್ಚಿಸುತ್ತೇನೆ. ಸಿಎಂ ಯಡಿಯೂರಪ್ಪ ನನ್ನ ಮಾತು ಮೀರಲ್ಲ. ನನ್ನ ಮೇಲೆ ವಿಶ್ವಾಸವಿಡಿ ಎಂದು ಮನವಿ ಮಾಡಿದರು. ಸಚಿವರ ಮನವಿಗೆ ಸ್ಪಂದಿಸಿದ ಸಂತ್ರಸ್ತರು ಧರಣಿ ಹಿಂಪಡೆದರು.