ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅತ್ಯಂತ ಸರಳವಾಗಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಭವನದಿಂದ ಆಗಮಿಸಿದ ಸತೀಶ್ ಜಾರಕಿಹೊಳಿ ಚುನಾವಣೆ ಅಧಿಕಾರಿ ಡಾ. ಹರಿಶಕುಮಾರ್ ಅವರಿಗೆ ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದರು. ಮೊದಲ ಸೆಟ್ ನಾಮಪತ್ರ ಸಲ್ಲಿಸುವಾಗ ಸತೀಶ್ ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಥ್ ನೀಡಿದರು.
ಎರಡನೇ ನಾಮಪತ್ರ ಸಲ್ಲಿಕೆ ವೇಳೆ ಆರ್.ವಿ. ದೇಶಪಾಂಡೆ, ಎಂಬಿ ಪಾಟೀಲ ಸಾಥ್ ನೀಡಿದರು. ಮೂರನೇ ಸೆಟ್ ಸಲ್ಲಿಸುವಾಗ ಸತೀಶ್ಗೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಫೀರೋಜ್ ಶೇಠ್ ಜೊತೆಗಿದ್ದರು.
ನಾಲ್ಕನೇ ನಾಮಪತ್ರ ಸಲ್ಲಿಸುವಾಗ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಮೂವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ ಅಭ್ಯರ್ಥಿ ಸೇರಿ ಮೂವರು ಮಾತ್ರ ಚುನಾವಣಾಧಿಕಾರಿಗಳ ಕಾರ್ಯಾಲಯದೊಳಗೆ ತೆರಳಿದರು. ಜಿಲ್ಲಾಧಿಕಾರಿ ಕಚೇರಿಗೆ ಬರುವಾಗ ಸತೀಶ್ ಜಾರಕಿಹೊಳಿ ಹಸಿರು ಶಾಲು ಧರಿಸಿ ಗಮನ ಸೆಳೆದರು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವ ತನಕ ಕಾಂಗ್ರೆಸ್ ಇತರ ನಾಯಕರು ಡಿಸಿ ಕಚೇರಿ ಆವರಣದ ಹೊರಗೆ ನಿಂತಿದ್ದರು.