ಗೋಕಾಕ್ (ಬೆಳಗಾವಿ): ಗೋಕಾಕ್ ವಿಧಾನಸಭಾ ಮತಕ್ಷೇತ್ರದ ಕುಂದರಗಿ, ಅಂಕಲಗಿ ಸೇರಿ ಇನ್ನಿತರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಇಂದು ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರ ನಡೆಸಿದರು.
ಪ್ರಚಾರದಲ್ಲಿ ಮಾತನಾಡಿದ ಅವರು "25 ವರ್ಷಗಳ ಕಾಲ ನಾನು ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಕೈಗೊಂಡಿರುವ ಕಾರ್ಯಗಳನ್ನು ನೋಡಿ, ಉಪಚುನಾವಣೆಯಲ್ಲಿ ನನಗೆ ಮತ ನೀಡಿ" ಎಂದು ಮನವಿ ಮಾಡಿದರು.
![sathish jarakiholi campaigns in gokak](https://etvbharatimages.akamaized.net/etvbharat/prod-images/kn-bgm-07-08-satish-jarkiholi-campain-ka10029_08042021181224_0804f_1617885744_707.jpg)
"25 ವರ್ಷಗಳ ಹಿಂದೆ ಗೋಕಾಕ್ ಮತಕ್ಷೇತ್ರದಲ್ಲಿ ರಾಜಕೀಯ ಸಂಘಟನೆ ಆರಂಭಿಸುವ ಮೂಲಕ ಈ ಭಾಗದ ಅನೇಕರು ರಾಜಕೀಯಕ್ಕೆ ಧುಮುಕಿದ್ದೆವು. ನಾವೆಲ್ಲರೂ ಈಗಲೂ ಒಟ್ಟಾಗಿದ್ದೇವೆ. ನಮ್ಮ ರಾಜಕೀಯ ಜೀವನಕ್ಕೆ ಮೂಲವೇ ಗೋಕಾಕ್ ಮತಕ್ಷೇತ್ರ. ಲೋಕಸಭಾ ಚುನಾವಣೆಯಲ್ಲೂ ನನ್ನನ್ನು ಬೆಂಬಲಿಸುವ ಮೂಲಕ ಗೋಕಾಕ್ ಮತದಾರರು ನನಗೆ ಮತ್ತಷ್ಟು ಶಕ್ತಿ ನೀಡಬೇಕು" ಎಂದು ಕೇಳಿಕೊಂಡರು.
![sathish jarakiholi campaigns in gokak](https://etvbharatimages.akamaized.net/etvbharat/prod-images/kn-bgm-07-08-satish-jarkiholi-campain-ka10029_08042021181224_0804f_1617885744_217.jpg)
"ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಆದರೂ, ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ. ಜನವಿರೋಧಿ ಸರ್ಕಾರಕ್ಕೆ ಪಾಠ ಕಲಿಸಲು ಉಪಚುನಾವಣೆ ಉತ್ತಮ ಅವಕಾಶವಾಗಿದೆ. ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸರ್ಕಾರಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು" ಎಂದು ಹೇಳಿದರು.