ಬೆಳಗಾವಿ : ತೋಟಗಾರಿಕೆ ಬೆಳೆ ಬೆಳೆಯುವ ರೈತರು ಹಾಗೂ ಮನೆ ಮುಂದೆ ಮತ್ತು ಟೆರಸ್ ಮೇಲೆ ಕೈತೋಟ ನಿರ್ಮಾಣ ಮಾಡುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಾವಿಯಲ್ಲಿ ನಿನ್ನೆಯಿಂದ ಮೂರು ದಿನ ಆಯೋಜಿಸಿರುವ ಸಸ್ಯ ಸಂತೆಗೆ ಚಾಲನೆ ಸಿಕ್ಕಿದ್ದು, ತರಹೇವಾರಿ ಸಸಿಗಳು ಎಲ್ಲರನ್ನೂ ಕೈ ಬೀಸಿ ಕರೆಯುತ್ತಿವೆ.
ಹೌದು, ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿರುವ ಹ್ಯೂಮ್ ಪಾರ್ಕ್ನಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿರುವ ಸಸ್ಯ ಸಂತೆ, ತೋಟಗಾರಿಕಾ ಅಭಿಯಾನ ಮತ್ತು ತಾಳೆ ಬೆಳೆ ಸಸಿ ವಿತರಣೆ ಕಾರ್ಯಕ್ರಮವನ್ನು ಶಾಸಕ ಆಸೀಫ್ (ರಾಜು) ಸೇಠ್ ಉದ್ಘಾಟಿಸಿದರು. ಈ ವೇಳೆ, ಸಂಸದೆ ಮಂಗಲಾ ಅಂಗಡಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಸೇರಿದಂತೆ ಮತ್ತಿತರರು ಇದ್ದರು.
ಇಲ್ಲಿ ಉತ್ತಮ ಗುಣಮಟ್ಟದ ಹೂವಿನ ಗಿಡಗಳು, ಅಲಂಕಾರಿಕ, ವಿವಿಧ ಬಗೆಯ ಹಣ್ಣಿನ ಗಿಡಗಳು, ಅಣಬೆ ಪ್ರಯೋಗಾಲದಲ್ಲಿ ಉತ್ಪಾದನೆ ಮಾಡುತ್ತಿರುವ ಅಣಬೆ ಬೀಜ, ಅಣಬೆ ಬೆಳೆ ಮತ್ತು ಜೇನು ಉತ್ಪನ್ನಗಳು, ಜೈವಿಕ ಕೇಂದ್ರ, ಬೆಳಗಾವಿಯಲ್ಲಿ ಉತ್ಪಾದಿಸಿದ ವಿವಿಧ ಜೈವಿಕ ಗೊಬ್ಬರಗಳನ್ನು ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಏರೆ ಜಲ, ಎರೆಹುಳು ಗೊಬ್ಬರವನ್ನು ಇಲಾಖೆ ದರದಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮಾರಾಟಕ್ಕೆ ಇಡಲಾಗಿದೆ. ಪೇರಲೆ, ಚಿಕ್ಕು, ಲಕ್ಷ್ಮಣಫಲ, ರಾಮಫಲ, ಕರಿಬೇವು, ಲಿಂಬೆ, ನೇರಳೆ, ತೆಂಗು ಸೇರಿ ಇನ್ನಿತರ ಸಸಿಗಳು, ಅಲಂಕಾರಿಕ ಸಸಿಗಳು, ಹೂವಿನ ಗಿಡಗಳು, ತರಕಾರಿ ಸಸಿಗಳನ್ನು ಇಲಾಖೆಯ ವತಿಯಿಂದ ಯೋಗ್ಯ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಜಿಲ್ಲೆಯ ಒಟ್ಟು 24 ತೋಟಗಾರಿಕೆ ಕ್ಷೇತ್ರಗಳ ಪೈಕಿ ಮುಖ್ಯವಾಗಿ ಶೇಡಗಳ್ಳಿ ತೋಟಗಾರಿಕೆ ಕ್ಷೇತ್ರ ಖಾನಾಪೂರ, ಹಿಡಕಲ್ ತೋಟಗಾರಿಕೆ ಕ್ಷೇತ್ರ ಹುಕ್ಕೇರಿ, ಧೂಪಧಾಳ ತೋಟಗಾರಿಕೆ ಕ್ಷೇತ್ರ ಗೋಕಾಕ, ಕಿತ್ತೂರ ತೋಟಗಾರಿಕೆ ಕ್ಷೇತ್ರ ಕಿತ್ತೂರ, ರಾಮದುರ್ಗ ಕಚೇರಿ ಸಸ್ಯಾಗಾರ ರಾಮದುರ್ಗ, ಮುನವಳ್ಳಿ, ಯಕ್ಕೇರಿ, ಉಗರಗೋಳ ತೋಟಗಾರಿಕೆ ಕ್ಷೇತ್ರಗಳು, ಸವದತ್ತಿ ಸೇರಿ 9 ಕಡೆ ಅಭಿವೃದ್ಧಿ ಪಡಿಸಿರುವ ಸಸಿಗಳು ಸಸ್ಯ ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಲ್ಲದೇ, ವರ್ಟಿಕಲ್ ಗಾರ್ಡನ್, ಹೈಡೋಪೋನಿಕ್ಸ್ ತಾಂತ್ರಿಕತೆ ಹಾಗೂ ಬೋನ್ಸಾಯ್ ಗಿಡಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದ್ದಾರೆ.
ಗಮನ ಸೆಳೆದ ಮಿಯಾಜಾಕಿ ಮಾವಿನ ಸಸಿ : ಸಸ್ಯ ಸಂತೆಯಲ್ಲಿ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮಾವಿನ ಹಣ್ಣು ಎಂದು ಕರೆಸಿಕೊಳ್ಳುವ ಜಪಾನ್ ಮೂಲದ ಮಿಯಾಜಾಕಿ ಮಾವಿನ ಹಣ್ಣಿನ ಸಸಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದರ ಬೆಲೆ ಬಂಗಾರಕ್ಕಿಂತೂ ಅತ್ಯಧಿಕವಾಗಿದ್ದು, ಪ್ರತಿ ಕೆ.ಜಿ. ಮಿಯಾಜಾಕಿ ಮಾವಿನ ಹಣ್ಣಿಗೆ 2.5 ಲಕ್ಷ ರೂ.ಗಳಿಂದ 2.7 ಲಕ್ಷ ರೂ. ಬೆಲೆಯಿದೆ. ಈ ತಳಿಯ ಮಾವು ಬೆಳೆಯಲು ಉತ್ತಮ ಬಿಸಿಲು ಮತ್ತು ನೀರಿನ ಅಗತ್ಯವಿದೆ. ಇದು ವರ್ಷಕ್ಕೊಮ್ಮೆ ಫಲ ನೀಡುತ್ತದೆ. ಈ ಮಾವು ಮೇಲಿನಿಂದ ಕೆಂಪು ಬಣ್ಣದ್ದಾಗಿದೆ. ಆದರೆ, ಒಳಗೆ ಹಳದಿ ಬಣ್ಣ ಇರುತ್ತದೆ. ಮಿಯಾಜಾಕಿ ಮಾವಿನ ವಿಶೇಷತೆಯೆಂದರೆ ಇದು ಹೆಚ್ಚಿನ ಪೌಷ್ಟಿಕಾಂಶ ಹೊಂದಿದೆ. ಇದರಲ್ಲಿ ಫೋಲಿಕ್ ಆಸಿಡ್, ಆ್ಯಂಟಿ ಆಕ್ಸಿಡೆಂಟ್, ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಒಳ್ಳೆಯದು. ಈ ಮಾವಿನ ಹಣ್ಣಿನ ಸಿಪ್ಪೆಯನ್ನು ಕೂಡ ಸುಲಭವಾಗಿ ತಿನ್ನಬಹುದಾಗಿದೆ.
ಇದನ್ನೂ ಓದಿ : ಹಸಿರು ಸಮೃದ್ಧಿಗಾಗಿ 'ಸಸ್ಯಸಂತೆ': ಶಿರಸಿಯಲ್ಲಿ 2.5 ಲಕ್ಷ ಸಸಿ ಮಾರಾಟ ಮಾಡುವ ಗುರಿ
ಸಸ್ಯ ಸಂತೆಯಲ್ಲಿ ನಾನಾ ತರಹದ ಹಣ್ಣು, ಹೂವಿನ ಒಳ್ಳೆಯ ಸಸಿಗಳು ಇವೆ. ಮನೆಯಲ್ಲಿ ಹಸಿರಿನ ವಾತಾವರಣ ನಿರ್ಮಿಸುವುದರಿಂದ ಪರಿಸರವನ್ನು ಕಾಪಾಡಬಹುದು. ಹಸಿರು ಇದ್ದರೆ ಎಲ್ಲರ ಮನೆ, ಮನದಲ್ಲೂ ಶಾಂತಿ ನೆಲೆಸುತ್ತದೆ. ರೈತರು ಹಾಗೂ ಎಲ್ಲ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್.
ಇದನ್ನೂ ಓದಿ : ಹಾಪ್‌ಕಾಮ್ಸ್ ಮಾವು ಮತ್ತು ಹಲಸಿನ ಹಣ್ಣುಗಳ ಮೇಳ ಆರಂಭ..